ಆ.2ರಂದು ಉಡುಪಿಯಲ್ಲಿ ‘ಮತ್ತೆ ಕಲ್ಯಾಣ’ ಕಾರ್ಯಕ್ರಮ

Update: 2019-06-23 14:10 GMT

ಉಡುಪಿ, ಜೂ.23: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಸಾಣೇಹಳ್ಳಿ ಮಠದ ಸಹಮತ ವೇದಿಕೆ ವತಿಯಿಂದ ಆ.1ರಿಂದ 30ರವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ‘ಮತ್ತೆ ಕಲ್ಯಾಣ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಪ್ರಯುಕ್ತ ಉಡುಪಿಯಲ್ಲಿ ಆ.2ರಂದು ಸಂಜೆ 5ಗಂಟೆಗೆ ಸಾರ್ವಜನಿಕ ಸಮಾ ವೇಶ ನಡೆಯಲಿದೆ.

ಉಡುಪಿ ಜಂಗಮ ಮಠದಲ್ಲಿ ನಡೆದ ಮತ್ತೆ ಕಲ್ಯಾಣ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಸಲಹಾ ಸಮಿತಿ ಸಂಚಾಲಕ ಚಟ್ನಳ್ಳಿ ಮಹೇಶ್ ಈ ಕುರಿತು ಮಾಹಿತಿ ನೀಡಿದರು. ಸಾಣೇಹಳ್ಳಿ ಮಠದ ಶ್ರೀಪಂಡಿತಾರಾಧ್ಯ ಶಿವಾ ಚಾರ್ಯ ಸ್ವಾಮಿಗಳ ಮುತುವರ್ಜಿಯಲ್ಲಿ 12ನೆ ಶತಮಾನದ ಶರಣ ಚಳವಳಿ ತೋರಿಸಿದ ಅರಿವಿನ ಮಾರ್ಗವನ್ನು ಮತ್ತೆ ಕಂಡುಕೊಳ್ಳುವ ಮತ್ತು ಸಮಕಾಲೀನ ಸಮಸ್ಯೆಗಳಿಗೆ ಸಮೃದ್ಧವಾಗಿ ಉತ್ತರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಆ.1ರಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಿಂದ ಆರಂಭಗೊಳ್ಳುವ ಈ ಕಾರ್ಯಕ್ರಮವು ಆ.30ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣ ಸಮಾಪ್ತಿ ಗೊಳ್ಳಲಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆಗೂ ಪಂಡಿತಾರಾಧ್ಯ ಸ್ವಾಮೀಜಿಗಳು ಭೇಟಿ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.
ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಉಡುಪಿ ಜಿಲ್ಲೆಯ ವಿವಿಧ ಕಾಲೇಜು ಗಳ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗುವುದು. ಇದರಲ್ಲಿ ಆಯ್ಕೆ ಮಾಡಿದ ವಿದ್ಯಾರ್ಥಿಗಳೊಂದಿಗೆ ಆ.2ರಂದು ಬೆಳಗ್ಗೆ 11 ಗಂಟೆಗೆ ಮುಕ್ತ ಸಂವಾದ ನಡೆಸಲಾಗುವುದು. ಇದರಲ್ಲಿ ಇಬ್ಬರು ಚಿಂತಕರು ಹಾಗೂ ಪಂಡಿತಾರಾಧ್ಯ ಸ್ವಾಮೀಜಿಗಳು ಭಾಗವಹಿಸಲಿರುವರು ಎಂದು ಅವರು ತಿಳಿಸಿದರು.

ಸಂಜೆ ಐದು ಗಂಟೆಗೆ ಸಾರ್ವಜನಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಇನ್ನಷ್ಟೆ ಸ್ಥಳವನ್ನು ಆಯ್ಕೆ ಮಾಡಬೇಕಾಗಿದೆ. ಇದರಲ್ಲಿ ಚಿಂತಕರು, ಪಂಡಿತಾ ರಾಧ್ಯ ಸ್ವಾಮೀಜಿ ಭಾಗವಹಿಸಲಿರುವರು. ಕಾರ್ಯಕ್ರಮಕ್ಕೆ ಮುನ್ನ ಎಲ್ಲ ಜಾತಿ ಧರ್ಮಗಳ ಜನರೊಂದಿಗೆ ಸಾರಮಸ್ಯದ ನಡಿಗೆ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8.30ಕ್ಕೆ ಸಾಣೇಹಳ್ಳಿ ಶಿವ ಸಂಚಾರ ತಂಡದಿಂದ ನಾಟಕ ಹಾಗೂ ರಾತ್ರಿ 10ಗಂಟೆಗೆ ಸಾಮೂಹಿಕ ಪ್ರಸಾದ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಎಲ್ಲ ಸಮುದಾಯಗಳನ್ನು ಒಳಗೊಂಡ ಮತ್ತೆ ಕಲ್ಯಾಣ ಜಿಲ್ಲಾ ಸಮಿತಿಯನ್ನು ರಚಿಸಲಾಗುವುದು. ಅದರಂತೆ ಉಡುಪಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಂಬಂಧಿಸಿ ನಾಲ್ಕು ಕಮಿಟಿಗಳನ್ನು ರಚಿಸಿ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಲಾುವುದು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಮಠದ ಸಲಹಾ ಸಮಿತಿಯ ಅಧ್ಯಕ್ಷ ಎ.ಸಿ.ಚಂದ್ರಪ್ಪ, ಸಂಯೋಜಕ ಮಂಡಳಿಯ ಸದಸ್ಯ ಎಚ್.ಎಸ್.ದ್ಯಾಮೇಶ್, ಉಡುಪಿ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸಿ.ಎಸ್.ಚಂದ್ರಶೇಖರ್, ಜಂಗಮ ಮಠದ ಡಾ.ಯು.ಸಿ.ನಿರಂಜನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News