ಸಹಕಾರ ಮನೋಭಾವದಿಂದ ಸಂಘಟನೆ ಬೆಳೆಯಲು ಸಾಧ್ಯ: ರೋಲ್ಫಿ ಡಿಕೋಸ್ತಾ

Update: 2019-06-23 14:11 GMT

ಉಡುಪಿ, ಜೂ.23: ಸಂಘಟನೆಯ ಪದಾಧಿಕಾರಿಗಳು ಪರಸ್ಪರ ಸಹಕಾರ ಮನೋಭಾವದಿಂದ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಆ ಸಂಘಟನೆ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಇದರ ಅಧ್ಯಕ್ಷ ರೋಲ್ಫಿ ಡಿಕೋಸ್ತಾ ಹೇಳಿದ್ದಾರೆ.

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ವತಿಯಿಂದ ಉಡುಪಿ ಶೋಕ ಮಾತಾ ಚರ್ಚಿನ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ಆಮ್ಚೊ ಸಂದೇಶ್ ಪತ್ರಿಕಾ ಪ್ರತಿನಿಧಿಗಳಿಗೆ, ಕೋಶಾಧಿಕಾರಿಗಳಿಗೆ ಮತ್ತು ಮಾಧ್ಯಮ ಹಾಗೂ ಪ್ರಚಾರ ಸಮಿತಿಯ ಸದಸ್ಯರುಗಳಿಗೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕೆಥೊಲಿಕ್ ಸಭಾ ಸಂಘಟನೆ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಲಿಷ್ಠವಾಗಿ ಬೆಳೆಯಲು ಸದಸ್ಯರ ಮತ್ತು ಪದಾಧಿಕಾರಿಗಳ ಒಗ್ಗಟ್ಟು ಕಾರಣ. ಈ ಒಗ್ಗಟ್ಟು ಮುರಿಯುವ ಪ್ರಯತ್ನ ಕೂಡ ನಡೆದಾಗ ಅದಕ್ಕೆ ಸ್ಪಷ್ಟ ಉತ್ತರ ಸದಸ್ಯರು ನೀಡಲು ಬದ್ಧರಾಗಬೇಕು. ಆಗ ಮಾತ್ರ ಸಂಘಟನೆ ಬಹು ಕಾಲ ಬಾಳಲು ಸಾಧ್ಯವಿದೆ ಎಂದರು.

ಆಮ್ಚೊ ಸಂದೇಶ್ ಪತ್ರಿಕೆಯ ಪ್ರತಿನಿಧಿಗಳಿಗೆ ಪತ್ರಿಕೆಯ ಸಂಪಾದಕ ವಿಲ್ಫ್ರೇಡ್ ಲೋಬೊ ಮಾತನಾಡಿ, ಪತ್ರಿಕೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಚಂದಾದಾರರಾಗಲು ಜನರನ್ನು ಪ್ರೇರೆಪಿಸುವಂತೆ ಮಾಡಬೇಕು ಎಂದು ತಿಳಿಸಿದರು.

ಸಂಘಟನೆಯ ಲೆಕ್ಕಪತ್ರವನ್ನು ಯಾವ ರೀತಿಯಲ್ಲಿ ಪಾರದರ್ಶಕವಾಗಿರಿಸ ಬೇಕು ಎಂಬ ಕುರಿತು ಹಿರಿಯ ಲೆಕ್ಕಪರಿಶೋಧಕ ಪ್ರೀತೇಶ್ ಡೆಸಾ ಹಾಗೂ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡಿನ ಬಗ್ಗೆ ಸಂಚಾಲಕ ವಿವಿಯನ್ ಕರ್ನೆಲಿಯೋ ಮತ್ತು ವೆರೋನಿಕಾ ಕರ್ನೆಲಿಯೋ ಮಾಹಿತಿ ನೀಡಿದರು.

ಮಾಧ್ಯಮಗಳ ಉಪಯೋಗ ಯಾವ ರೀತಿಯಲ್ಲಿ ಮಾಡಬೇಕು. ಸಾಮಾಜಿಕ ಜಾಲತಾಣಗಳ ಕುರಿತು ವಹಿಸಬೇಕಾದ ಎಚ್ಚರಿಕೆ, ಕಾರ್ಯಕ್ರಮದ ವರದಿ ಯನ್ನು ಯಾವ ರೀತಿಯಲ್ಲಿ ತಯಾರಿಸಬೇಕು ಎಂಬ ಕುರಿತು ಉಡುಪಿ ಧರ್ಮ ಪಾಂತ್ಯದ ಮಾಧ್ಯಮ ಸಂಯೋಜಕ ಪತ್ರಕರ್ತ ಮೈಕಲ್ ರೊಡ್ರಿಗಸ್ ಮಾಹಿತಿ ನೀಡಿದರು.

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ನಿಕಟಪೂರ್ವ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್, ನಿಯೋಜಿತ ಅಧ್ಯಕ್ಷ ರೋಬರ್ಟ್ ಮಿನೇಜಸ್, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಸಂಚಾಲಕ ಲೂಯಿಸ್ ಮ್ಯಾಕ್ಷಿಮ್ ಡಿಸೋಜ ಉಪಸ್ಥಿತರಿದ್ದರು.
ಸಶಕ್ತ ಸಮುದಾಯ ಟ್ರಸ್ಟ್ ಅಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೊ ಪ್ರಾಸ್ತಾವಿಕ ವಾಗಿ ಮಾತನಾಡಿದರು.

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸಂತೋಷ್ ಕರ್ನೆಲಿಯೋ ವಂದಿಸಿದರು. ಅನಿತಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News