ಮತ್ತಾವು ಸೇತುವೆ ನಿರ್ಮಾಣಕ್ಕೆ 2 ಕೋಟಿ ಮೀಸಲು: ಸುನೀಲ್ ಕುಮಾರ್

Update: 2019-06-23 14:16 GMT

ಕಾರ್ಕಳ, ಜೂ.23: ನಕ್ಸಲ್ ಬಾಧಿತ ಪ್ರದೇಶವಾಗಿರುವ ಮತ್ತಾವು ಹೊಳೆಗೆ ಸೇತುವೆ ನಿರ್ಮಿಸಲು ಎರಡು ಕೋಟಿ ರೂ.ವನ್ನು ಮೀಸಲಿರಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ತಿಳಿಸಿದ್ದಾರೆ.

ನಕ್ಸಲ್ ನಿಗ್ರಹ ದಳ ಕ್ಯಾಂಪ್ ಹೆಬ್ರಿ, ಪೊಲೀಸ್ ಠಾಣೆ ಹೆಬ್ರಿ, ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ, ಮುದ್ರಾಡಿ ಗ್ರಾಮ ಪಂಚಾಯತ್, ಲಯನ್ಸ್ ಕ್ಲಬ್ ಹೆಬ್ರಿ ಸಿಟಿ, ವ್ಯವಸಾಯ ಸೇವಾ ಸಹಕಾರ ಸಂಘ ಹೆಬ್ರಿ-ವರಂಗ ಹಾಗೂ ವಿವಿಧ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಕ್ಸಲ್ ಬಾಧಿತ ಪ್ರದೇಶಗಳ ಗ್ರಾಮಸ್ಥರಿಗೆ ರವಿವಾರ ಕಬ್ಬಿನಾಲೆಯ ಶ್ರೀಲಕ್ಷ್ಮೀನಾರಾ ಯಣ ದೇವಸ್ಥಾನ ಆವರಣದಲ್ಲಿ ಆಯೋಜಿಸಲಾದ ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನಕ್ಸಲ್ ಬಾಧಿತ ಮತ್ತಾವುನಲ್ಲಿ ಹಲವು ವರ್ಷಗಳ ಬೇಡಿಕೆಯಾದ ಸೇತುವೆ ನಿರ್ಮಾಣಕ್ಕೆ ಈಗಾಗಲೇ ಎರಡು ಕೋಟಿ ರೂ.ವನ್ನು ಮೀಸಲಿಟ್ಟಿದ್ದು, ಅರಣ್ಯ ಇಲಾಖೆಯೊಂದಿಗಿನ ಕಾನೂನು ತೊಡಕಿನಿಂದ ಕಾಮಗಾರಿ ಆರಂಭಿಸುವಲ್ಲಿ ವಿಳಂಬವಾಗಿದೆ. ಶೀಘ್ರದಲ್ಲಿ ಅರಣ್ಯ ಇಲಾಖೆಯ ಅನುಮತಿ ದೊರೆಯುವ ನಿರೀಕ್ಷೆ ಇದೆ. ಅನುಮತಿ ದೊರೆತ ಕೂಡಲೇ ಕಾಮಗಾರಿ ಆರಂಭವಾಗಲಿದೆ ಎಂದರು.

ಮೇಲ್ಮಠ ರಸ್ತೆ ಕಾಮಗಾರಿಗೆ 50 ಲಕ್ಷ ರೂ. ಅನುದಾನ ಇರಿಸಲಾಗಿದ್ದು, ಜುಲೈ ತಿಂಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಆರಂಭವಾಗಲಿದೆ. ಸರಕಾರದ ಎಲ್ಲ ಇಲಾಖೆಗಳು ಜನಸ್ನೇಹಿಯಾದರೆ ಮಾತ್ರ ಜನಪರ ಆಡಳಿತ ಸಾಧ್ಯವಾಗ ಲಿದೆ. ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯಗಳು ಪ್ರತಿಯೊಬ್ಬ ನಾಗರಿಕ ರಿಗೂ ದೊರೆಯಬೇಕು ಎಂದು ಅವರು ಹೇಳಿದರು.

ಮುದ್ರಾಡಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ಪೂಜಾರಿ, ಹೆಬ್ರಿ ತಹಶಿಲ್ದಾರ್ ಮಹೇಶ್ಚಂದ್ರ, ತಾಪಂ ಸದಸ್ಯ ಲಕ್ಷ್ಮೀದಯಾನಂದ, ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ, ಹೆಬ್ರಿ ಠಾಣಾಧಿಕಾರಿ ಮಹಾಬಲ ಶೆಟ್ಟಿ, ಹೆಬ್ರಿ ವೈದ್ಯಾಧಿಕಾರಿ ಡಾ.ನರಸಿಂಹ ನಾಯಕ್ ಉಪಸ್ಥಿತರಿದ್ದರು. ನಕ್ಸಲ್ ನಿಗ್ರಹ ಪಡೆಯ ಉಪಾಧೀಕ್ಷಕಗಣೇಶ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News