ಭಾರತ್ ಮಾಲಾ ಯೋಜನೆಯ ಕಾಮಗಾರಿಗೆ ಡಿಪಿಆರ್ ಸಿದ್ಧ: ನಳಿನ್

Update: 2019-06-23 14:41 GMT

ಮಂಗಳೂರು, ಜೂ.23: ಭಾರತ್‌ಮಾಲಾ ಯೋಜನೆಯಡಿ ಸುಮಾರು 2 ಸಾವಿರ ಕೋ.ರೂ. ವೆಚ್ಚದಲ್ಲಿ ಮುಲ್ಕಿ-ಕಿನ್ನಿಗೋಳಿ-ಕಟೀಲು-ಬಜ್ಪೆ-ಗುರುಪುರ ಕೈಕಂಬ-ಪೊಳಲಿ- ಬಿಸಿರೋಡ್- ಮೇಲ್ಕಾರ್-ಮುಡಿಪು-ಕೊಣಾಜೆ-ಬೀರಿ ಮೂಲಕ ಮಂಗಳೂರು ಬೈಪಾಸ್ ನಿರ್ಮಾಣಗೊಳ್ಳಲಿದ್ದು, ಇದರ ಡಿಪಿಆರ್ ಕೂಡ ಅನುಮೋದನೆಗೊಂಡಿವೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ರಿಂಗ್‌ರೋಡ್ ನಿರ್ಮಾಣವಾದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಹೆದ್ದಾರಿ 75ರ ಬಿಸಿರೋಡ್-ಅಡ್ಡಹೊಳೆ ನಡುವಿನ ಚತುಷ್ಪಥ ಕಾಮಗಾರಿಗೆ ಅರಣ್ಯ ಇಲಾಖೆಯ ಕ್ಲೀಯರೆನ್ಸ್ ಬಾಕಿ, ಕೆಲವು ತಾಂತ್ರಿಕ ತೊಂದರೆ ಮತ್ತು ಪ್ರಾಕೃತಿಕ ಸಮಸ್ಯೆಯಿಂದ ವಿಳಂಬಗೊಂಡಿದ್ದರೂ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಎಲ್‌ಆ್ಯಂಡ್‌ಟಿ ಕಂಪೆನಿಯೇ ಕಾಮಗಾರಿ ಮುಂದುವರೆಸಲಿದೆ. ಈ ನಿಟ್ಟಿನಲ್ಲಿ ಮುಂದಿನ ವಾರ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಭೆ ನಡೆಸಲಿದ್ದಾರೆ ಎಂದು ನಳಿನ್ ತಿಳಿಸಿದರು.

ಬಿಸಿರೋಡ್‌ನಿಂದ ಅಡ್ಡಹೊಳೆವರೆಗಿನ 27 ಕಿಮೀ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಕ್ಲೀಯರೆನ್ಸ್ ಸಿಗಬೇಕಿದೆ. ರಸ್ತೆ ವಿಸ್ತರಣೆ ನಡೆದ ಬಳಿಕ ಕೆಲವು ಕಡೆ ಮಣ್ಣು ಸಡಿಲವಾದ ಕಾರಣ ಇನ್ನಷ್ಟು ಭೂಸ್ವಾಧೀನ ಆಗಬೇಕಿದೆ. ಈ ಹಿಂದೆ ಉಪ್ಪಿನಂಗಡಿ, ಕಲ್ಲಡ್ಕ, ಮಾಣಿಯಲ್ಲಿ ಫ್ಲೈ ಓವರ್ ನಿರ್ಮಾಣದ ಪ್ರಸ್ತಾವನೆಯಿತ್ತು. ಈಗ ಮೂರೂ ಕಡೆ ಫ್ಲೈ ಓವರ್ ನಿರ್ಮಾಣ ಕೈಬಿಡಲಾಗಿದೆ. ಎಲ್‌ಆ್ಯಂಡ್‌ಟಿ ಕಂಪೆನಿಯು ಮಳೆಗಾಲದ ಬಳಿಕ ಕಾಮಗಾರಿ ನಡೆಸಲಿದೆ. ಆವರೆಗೆ ಹೆದ್ದಾರಿ ನಿರ್ವಹಣೆಯನ್ನು ಕಂಪೆನಿಯೇ ಮಾಡಲಿದೆ. ಯಾವುದೇ ತೊಂದರೆ ಉಂಟಾದರೂ ಅದಕ್ಕೆ ಕಂಪೆನಿಯೇ ಹೊಣೆಯಾಗಲಿದೆ ಎಂದರು.

ತೊಕ್ಕೊಟ್ಟು ಫ್ಲೈ ಓವರ್ ಸಂಚಾರಕ್ಕೆ ಮುಕ್ತಗೊಂಡಿದ್ದರೂ ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಉಳ್ಳಾಲಕ್ಕೆ ತೆರಳವಲ್ಲಿ ದೊಡ್ಡ ವೃತ್ತ ನಿರ್ಮಿಸಿ ಸಮಸ್ಯೆ ಬಗೆಹರಿಸಲಾಗುವುದು. ಈ ಬಗ್ಗೆ ಅಧಿಕಾರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ. ಪಡೀಲ್ ರೈಲ್ವೆ ಕೆಳಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ರಸ್ತೆಗೆ ಕಾಂಕ್ರಿಟ್ ಆಗಬೇಕಿದೆ. ಮಳೆಗಾಲದ ಬಳಿಕ ಈ ಕೆಲಸ ಮುಗಿದು ವಾಹನ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಗುರುಪುರದಲ್ಲಿ ಹೊಸ ಬೈಪಾಸ್‌ರಸ್ತೆ ನಿರ್ಮಾಣವಾಗಲಿದೆ. ಅದಕ್ಕಾಗಿ ಭೂಸ್ವಾಧೀನಕ್ಕೆ ನೋಟಿಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ನಳಿನ್ ತಿಳಿಸಿದರು.

ಮುಂದಿನ 5 ವರ್ಷದಲ್ಲಿ ಈ ಹಿಂದಿನ ಎಲ್ಲ ಬಾಕಿ ಕಾಮಗಾರಿಗಳನ್ನು ಮುಗಿಸಲು ಪ್ರಯತ್ನಿಸಲಾಗುವುದು. ರೈಲ್ವೆಯಲ್ಲಿ ಬದಲಾವಣೆ ತರಲಾಗುತ್ತಿದ್ದು, ಪ್ರತ್ಯೇಕ ಮಂಗಳೂರು ರೈಲ್ವೆ ವಿಭಾಗ ಸ್ಥಾಪನೆಗೆ ಮೊದಲ ಆದ್ಯತೆ ನೀಡಲಾಗುವುದು. ಕಾಂಞಂಗಾಡ್-ಕಾಣಿಯೂರು ರೈಲ್ವೆ ಮಾರ್ಗ ಸರ್ವೆ ಹಂತದಲ್ಲಿದೆ. ಶಿವಮೊಗ್ಗ -ಶೃಂಗೇರಿ- ಕಾರ್ಕಳ- ವೇಣೂರು- ಧರ್ಮಸ್ಥಳ ಹೊಸ ಹಳಿನಿರ್ಮಾಣ ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ತೋಕೂರು-ಅಂಕೋಲ ಮಧ್ಯೆ ದ್ವಿಪಥ ಆಗಲಿದೆ ಎಂದು ನಳಿನ್ ಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News