ಉಗ್ರವಾದ ನಿವಾರಣೆಗೆ ಸಕಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ: ಪಾಕ್ ಸೇನಾ ಮುಖ್ಯಸ್ಥ

Update: 2019-06-23 14:56 GMT

ಲಂಡನ್, ಜೂ.22: ದೇಶದಿಂದ ಉಗ್ರವಾದವನ್ನು ತೊಲಗಿಸಲು ಲಭ್ಯವಿರುವ ಎಲ್ಲ ಕ್ರಮಗಳನ್ನು ಬಳಸಲಾಗುತ್ತಿದೆ ಮತ್ತು ದೇಶವು ಸಮರ್ಥನೀಯ ಶಾಂತಿ ಮತ್ತು ಸ್ಥಿರತೆಯತ್ತ ಸಾಗುತ್ತಿದೆ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೆದ್ ಬಜ್ವಾ ತಿಳಿಸಿದ್ದಾರೆ.

 ಲಂಡನ್‌ನಲ್ಲಿ ನಡೆದ ಅಂತರ್‌ರಾಷ್ಟ್ರೀಯ ಯುದ್ಧತಂತ್ರ ಅಧ್ಯಯನಗಳ ಸಂಸ್ಥೆ (ಐಐಎಸ್‌ಎಸ್) ಸಭೆಯಲ್ಲಿ ಮಾತನಾಡಿದ ಅವರು ಉಗ್ರವಾದವು ಒಂದು ಸಮನಾದ ಶತ್ರುವಾಗಿರುವುದರಿಂದ ಎಲ್ಲ ದೇಶಗಳು ಅದನ್ನು ತೊಲಗಿಸುವ ಕಾರ್ಯದಲ್ಲಿ ಪರಸ್ಪರರಿಗೆ ಸಹಕಾರ ನೀಡಬೇಕು ಎಂದು ಬಾಜ್ವಾ ಮನವಿ ಮಾಡಿದ್ದಾರೆ. ಉಗ್ರವಾದಕ್ಕೆ ಹರಿದುಬರುತ್ತಿರುವ ಹಣದ ಮೂಲವನ್ನು ಹುಡುಕಲು ಸೂಕ್ತ ಯೋಜನೆಯನ್ನು ಅಕ್ಟೋಬರ್ ಒಳಗಾಗಿ ರಚಿಸಿ ಅಥವಾ ಪರಿಣಾಮ ಎದುರಿಸಲು ಸಿದ್ದರಾಗಿ ಎಂದು ವಿತ್ತೀಯ ಕ್ರಮಗಳ ಕಾರ್ಯ ಪಡೆ (ಎಫ್‌ಎಟಿಎಫ್) ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ಈ ಸ್ಪಷ್ಟನೆಯನ್ನು ನೀಡಿದೆ.

ನಾವು ಲಭ್ಯವಿರುವ ಎಲ್ಲ ಮೂಲಗಳನ್ನು ಬಳಸಿಕೊಂಡು ಶಾಂತಿ ಮತ್ತು ಸ್ಥಿರತೆಯ ಶತ್ರುವಾಗಿರುವ ಉಗ್ರವಾದದ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ದಕ್ಷಿಣ ಏಶ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಯು ಈ ಪ್ರದೇಶದಲ್ಲಿನ ಸಂಘರ್ಷಗಳು ಮತ್ತು ವಿವಾದಗಳ ಬಗ್ಗೆ ತೆಗೆದುಕೊಳ್ಳುವ ನಿರ್ಣಯಗಳ ಮೇಲೆ ಅವಲಂಬಿತವಾಗಿದೆ ಎನ್ನುವುದು ವಾಸ್ತವ ಎಂದು ಬಾಜ್ವಾ ತಿಳಿಸಿದ್ದಾರೆ. ಉತ್ತಮ ಭದ್ರತೆಯಿಂದ ಪಾಕಿಸ್ತಾನಕ್ಕೆ ವಿದೇಶಿ ಹೂಡಿಕೆಯ ಬಾಗಿಲು ತೆರೆದುಕೊಳ್ಳುತ್ತದೆ ಮತ್ತು ವಾಸ್ತವದಲ್ಲಿ, ವಿದೇಶಿ ಹೂಡಿಕೆ ಪ್ರಾದೇಶಿಕ ಸಹಯೋಗದಲ್ಲಿ ಮಹತ್ವದ ಪಾತ್ರವನ್ನು ನಿಬಾಯಿಸುತ್ತದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಸದ್ಯ ಪಾಕಿಸ್ತಾನ ಎಫ್‌ಎಟಿಎಫ್‌ನ ಕಂದು ಪಟ್ಟಿಯಲ್ಲಿದೆ. ಈ ಪಟ್ಟಿಯಲ್ಲಿ, ಉಗ್ರವಾದಕ್ಕೆ ಹಣ ಪೂರೈಕೆ ಮತ್ತು ಹಣ ವಂಚನೆಯನ್ನು ತಡೆಯುವಲ್ಲಿ ಅಸಮರ್ಥ ಕ್ರಮಗಳನ್ನು ತೆಗೆದುಕೊಂಡಿರುವ ದೇಶಗಳು ಸೇರಿವೆ. ಪಾಕಿಸ್ತಾನ ಈಗಾಗಲೇ ನಿಗಾ ಸಂಸ್ಥೆ ನೀಡಿರುವ, 2019ರ ಜನವರಿ ಮತ್ತು ಮೇಯ ಅಂತಿಮ ಗಡುವನ್ನು ತಪ್ಪಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News