ಪಾನೀರ್ ಕೆಥೊಲಿಕ್ ಸಭಾದಿಂದ ಸಸಿ ವಿತರಣೆ-ಮಾಹಿತಿ ಕಾರ್ಯಕ್ರಮ

Update: 2019-06-23 15:05 GMT

ದೇರಳಕಟ್ಟೆ, ಜೂ. 23:ವಿದ್ಯಾರ್ಥಿಗಳಿಗೆ ಸರಕಾರಿ ಸವಲತ್ತು ಪಡೆಯಲು ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಿದ್ದು, ಜಾಗರೂಕತೆಯಿಂದ ಭರ್ತಿ ಮಾಡಬೇಕು. ಅರ್ಜಿ ಕಾಲಂನಲ್ಲಿ ಟ್ಯೂಶನ್ ಶುಲ್ಕ ಹಾಕಿದರೆ ಆ ಹಣವು ಸ್ಕಾಲರ್ ಶಿಪ್ ಮೂಲಕ ಸಿಗಲಿದೆ ಎಂದು ಮಂಗಳೂರು ತಾಲೂಕು ಮಾಹಿತಿ ಕೇಂದ್ರದ ಸಂಯೋಜಕ ನಝೀರ್ ಹೇಳಿದರು.

ಕೆಥೊಲಿಕ್ ಸಭಾ ಪಾನೀರ್ ಘಟಕದ ವತಿಯಿಂದ ಪಾನೀರ್ ಚರ್ಚ್ ಸಭಾಂಗಣದಲ್ಲಿ ರವಿವಾರ ನಡೆದ ಸರಕಾರಿ ಸವಲತ್ತುಗಳ ಮಾಹಿತಿ ಹಾಗೂ ಸಸಿ ವಿತರಣಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಅಲ್ಪಸಂಖ್ಯಾತ ಇಲಾಖೆಯಿಂದಲೇ ಐಎಎಸ್, ಐಪಿಎಸ್ ತರಬೇತಿ ಕೇಂದ್ರಗಳಿದ್ದು, ಹತ್ತು ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಸಿಇಟಿ, ನೀಟ್ ತರಬೇತಿಯೂ ಉಚಿತವಾಗಿ ನೀಡುವ ವ್ಯವಸ್ಥೆಯಿದ್ದು ಹತ್ತು ಸಾವಿರ ರೂ. ಮೌಲ್ಯದ ಪುಸ್ತಕ ಉಚಿತವಾಗಿ ನೀಡಲಾಗುತ್ತದೆ. ಪಿಎಚ್‌ಡಿ ಮತ್ತು ಎಂಫಿಲ್ ಮಾಡುವವರಿಗೆ 25 ಸಾವಿರ, ಹೊರದೇಶದಲ್ಲಿ ಕಲಿಯಲು ಬಯಸುವವರಿಗೆ ಎರಡು ವರ್ಷಕ್ಕೆ ಹತ್ತು ಲಕ್ಷ ವಿದ್ಯಾರ್ಥಿ ವೇತನ ನೀಡಲಾಗುತ್ತದೆ ಎಂದು ನಝೀರ್ ತಿಳಿಸಿದರು.

ಕೆಥೊಲಿಕ್ ಸಭಾ ಪಾನೀರ್ ಘಟಕಾಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ ಮಾತನಾಡಿದರು. ಪಾನೀರ್ ಮರ್ಸಿಯಮ್ಮನವರ ಇಗರ್ಜಿಯ ಧರ್ಮಗುರು ಫಾ.ಡೆನ್ನಿಸ್ ಸುವಾರಿಸ್ ಅಧ್ಯಕ್ಷತೆ ವಹಿಸಿದ್ದರು. ಪಾಲನಾ ಮಂಡಳಿಯ ಉಪಾಧ್ಯಕ್ಷ ಎಲಿಯಾಸ್ ಡಿಸೋಜ, ಕಾರ್ಯದರ್ಶಿ ಡೆನ್ನಿಸ್ ಗೊನ್ಸಾಲ್ವಿಸ್, ಕಾರ್ಯಕ್ರಮ ಪ್ರಯೋಜಕರಾದ ಅಮಿತ್ ನೊರೊನ್ಹ, ರೆನ್ನಿ ಲೋಬೋ, ಬ್ರದರ್ ಜೈಸನ್ ಕುಟಿನ್ಹಾ ಉಪಸ್ಥಿತರಿದ್ದರು.

ಕೆಥೊಲಿಕ್ ಸಭಾ ಸಂಚಾಲಕ ಆಲ್ವಿನ್ ಡಿಸೋಜ ಸ್ವಾಗತಿಸಿದರು. ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರುವಿತಾ ಮಿನೇಜಸ್ ವಂದಿಸಿದರು. ವಿನ್ನಿ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News