ಐದು ವರ್ಷಗಳಲ್ಲಿ ರಾಜ್ಯದಲ್ಲೇ ದ.ಕ. ನಂ.1: ನಳಿನ್ ಕುಮಾರ್ ಕಟೀಲ್

Update: 2019-06-23 15:52 GMT

ಮೂಡುಬಿದಿರೆ: ಕಳೆದ ಐದು ವರ್ಷದಲ್ಲಿ ಬಿಜೆಪಿ ಸ್ಥಳೀಯಾಡಳಿತ, ವಿಧಾನಸಭೆ, ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಮುಕ್ತವಾಗುತ್ತಿದೆ. ಚುನಾಯಿತ ಎಲ್ಲ ಅಭ್ಯರ್ಥಿಗಳು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಬೇಕು. ಕಾರ್ಯಕರ್ತರು ಕೇಂದ್ರ ಸರ್ಕಾರದ ಆಡಳಿತವನ್ನು ಜನರಿಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ದ.ಕ ಜಿಲ್ಲೆ ಲೋಕಸಭಾ ಕ್ಷೇತ್ರವನ್ನು ಮುಂದಿನ ಐದು ವರ್ಷಗಳಲ್ಲಿ ಅಭಿವೃದ್ಧಿ ವಿಷಯದಲ್ಲಿ ನಂ.1 ರೂಪಿಸುತ್ತೇವೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದರು. 

ಸಂಸದರಾಗಿ ಮೂರನೇ ಬಾರಿಗೆ ಆಯ್ಕೆಯಾದ ನಳಿನ್ ಕುಮಾರ್ ಕಟೀಲ್ ಹಾಗೂ ಮೂಡುಬಿದಿರೆ ಪುರಸಭೆ ಹಾಗೂ ಮುಲ್ಕಿ ನಗರಸಭೆಗೆ ಆಯ್ಕೆಯಾದ ಬಿಜೆಪಿ ಅಭ್ಯರ್ಥಿಗಳಿಗೆ ಪದ್ಮಾವತಿ ಕಲಾಮಂದಿರದಲ್ಲಿ ರವಿವಾರ ಏರ್ಪಡಿಸಲಾದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಇದು ಕೇವಲ ಸಂಸದನಿಗೆ ಮಾಡಿದ ಅಭಿನಂದನೆಯಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯ, ಜನಪರ ನಡೆಯನ್ನು ಮೆಚ್ಚಿದ ಮತದಾರರ, ಬಿಜೆಪಿಯ ಸರ್ಕಾರ, ಧ್ಯೇಯೋದ್ಧೇಶಗಳನ್ನು ಜನರಿಗೆ ತಲುಪಿಸಿದ ಕಾರ್ಯಕರ್ತರಿಗೆ ನೀಡಿದ ಅಭಿನಂದನೆ. ಜಿಲ್ಲೆಯ ಶೇ.80ರಷ್ಟು ಆಡಳಿತ ಬಿಜೆಪಿ ಪಕ್ಷದ ಕೈಯಲ್ಲಿದ್ದು, ಜನರಿಗೆ ಉತ್ತಮ ಆಡಳಿತ ನೀಡೋಣ. ರಾಜ್ಯ ಸರ್ಕಾರ ನಮ್ಮ ಕೈಯಲ್ಲಿಲ್ಲ ಎನ್ನುವ ಕೊರಗು ಪಕ್ಷದ ಪ್ರತಿಯೊಬ್ಬರಲ್ಲಿದೆ . ಇದಕ್ಕೆ ಚಿಂತೆ ಬೇಡ. ಸಮ್ಮಿಶ್ರ ಸರ್ಕಾರ ಐಸಿಯುನಲ್ಲಿದ್ದು, ಕೆಲವೇ ದಿನಗಳಲ್ಲಿ ಅದು ವಿಸರ್ಜನೆಗೊಂಡು ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಉಮಾನಾಥ ಕೋಟ್ಯಾನ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಲೋಕಸಭಾ ಕೇತ್ರ, ಮೂಡುಬಿದಿರೆ-ಮೂಲ್ಕಿ ವಿಧಾನಸಭಾ ಕ್ಷೇತ್ರ, ಅದರಲ್ಲಿ ಬರುವ ಪುರಸಭೆ, ನಗರಸಭೆಗಳಲ್ಲಿ ಬಿಜೆಪಿ ಅರಳಿದ್ದು, ಇದರಲ್ಲಿ ಅಸಂಖ್ಯಾತ ಕಾರ್ಯಕರ್ತರ ಶ್ರಮವಿದೆ. ಅದರೊಂದಿಗೆ ಮೂಡುಬಿದಿರೆ ಮಂಡಲ ಅಧ್ಯಕ್ಷ ಈಶ್ವರ ಕಟೀಲ್ ಸಹಿತ ಹಿರಿಯ ನಾಯಕರ ಮಾರ್ಗದರ್ಶನವು ಸ್ಥಳೀಯಾಡಳಿತ, ಲೋಕಸಭೆ, ವಿಧಾನ ಸಭೆಯಲ್ಲಿ ಬಿಜೆಪಿ ಗೆಲ್ಲಲು ಕಾರಣವಾಗಿದೆ. ರಾಜ್ಯ ಸರ್ಕಾರದಿಂದ ಅನುದಾನ ಹಂಚಿಕೆಯಲ್ಲಿ ತಾರತಮ್ಯವಿದ್ದರೂ ಕ್ಷೇತ್ರದ ಅಭಿವೃದ್ಧಿ ಹೆಚ್ಚಿನ ಮಹತ್ವ ನೀಡುತ್ತಿದ್ದೇನೆ ಎಂದರು.

ಮಂಡಲ ಅಧ್ಯಕ್ಷ ಈಶ್ವರ ಕಟೀಲ್ ಸಮಾರಂಭದ ಅಧ್ಯಕ್ಷತೆವಹಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ ಅಭಿನಂದನಾ ಭಾಷಣ ಮಾಡಿದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ಬಿಜೆಪಿ ದ.ಕ ಜಿಲ್ಲಾ ಉಪಾಧ್ಯಾಕ್ಷ ಕೆ.ಪಿ ಜಗದೀಶ್ ಅಧಿಕಾರಿ, ಮಂಡಲ ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಜಯಾನಂದ ಮೂಲ್ಕಿ, ,ಬಿಜೆಪಿ ಮುಖಂಡರಾದ ಕೆ.ಆರ್ ಪಂಡಿತ್, ಬಾಹುಬಲಿ ಪ್ರಸಾದ್, ಎಂ.ಎಸ್ ಕೋಟ್ಯಾನ್, ಭುವನಾಭಿರಾಮ ಉಡುಪ, ರಮಾನಾಥ ಅತ್ತರ್, ಶಾಂತಿ ಪ್ರಸಾದ್ ಹೆಗ್ಡೆ, ಜಾಯ್ಲಸ್ ತಾಕೋಡೆ, ರಾಜೇಶ್ ಮಲ್ಯ, ಸೂರಜ್ ಜೈನ್, ಹರೀಶ್ ಎಂ.ಕೆ, ನಗರ ಹಾಗೂ ಪುರಸಭೆಗೆ ಆಯ್ಕೆಯಾದ ಅಭ್ಯರ್ಥಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. 
ಮಂಡಲ ಉಪಧ್ಯಕ್ಷ ಲೀಲಾ ಬಂಜನ್ ವಂದಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News