ಜು. 5: ನಾಲ್ವರು ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಪ್ರದಾನ

Update: 2019-06-23 16:00 GMT

ಮಂಗಳೂರು, ಜೂ.23: ದ.ಕ. ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿ ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿರುವ ನಾಲ್ವರು ಡಿವೈಎಸ್ಪಿ ದರ್ಜೆಯ ಪೊಲೀಸ್ ಅಧಿಕಾರಿಗಳಿಗೆ ಜು.5ರಂದು ಬೆಂಗಳೂರು ರಾಜಭವನದ ಗಾಜಿನಮನೆಯಲ್ಲಿ ರಾಜ್ಯಪಾಲರು ಪದಕ ಪ್ರದಾನ ಮಾಡಲಿದ್ದಾರೆ.

ಬೆಂಗಳೂರು ನಗರ ಕಬ್ಬನ್ ಪಾರ್ಕ್ ಉಪ ವಿಭಾಗದ ಎಸಿಪಿಯಾಗಿದ್ದ ವಿನಯ ಎ. ಗಾಂವ್ಕರ್ 2016ರ ಸ್ವಾತಂತ್ರ ದಿನಾಚರಣೆ ಸಂದರ್ಭ ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿದ್ದರು. ಪ್ರಸ್ತುತ ಮಂಗಳೂರು ಸಿಸಿಆರ್‌ಬಿ ಎಸಿಪಿಯಾಗಿದ್ದಾರೆ.

ಮಂಗಳೂರು ನಗರ ಕೇಂದ್ರ ಉಪವಿಭಾಗದ ಎಸಿಪಿಯಾಗಿದ್ದ ಉದಯ ಎಂ.ನಾಯಕ್ ಹಾಗೂ ಸಿಸಿಆರ್‌ಬಿ ಎಸಿಪಿಯಾಗಿದ್ದ ವೆಲೆಂಟೈನ್ ಡಿಸೋಜ 2017ರಲ್ಲಿ ಗಣರಾಜ್ಯೋತ್ಸವ ಸಂದರ್ಭ ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿದ್ದರು. ಪ್ರಸ್ತುತ ಉದಯ ನಾಯಕ್ ಎಸ್ಪಿಯಾಗಿ ಭಡ್ತಿ ಹೊಂದಿ ನಿವೃತ್ತರಾಗಿದ್ದಾರೆ. ವೆಲೆಂಟೈನ್ ಡಿಸೋಜ ಭಟ್ಕಳದಲ್ಲಿ ಡಿವೈಎಸ್ಪಿಯಾಗಿದ್ದಾರೆ.

ಭ್ರಷ್ಟಾಚಾರ ನಿಗ್ರಹದಳದ ಡಿವೈಎಸ್ಪಿಯಾಗಿರುವ ಸುಧೀರ್ ಎಂ. ಹೆಗ್ಡೆ ಹಾಗೂ ಗೃಹರಕ್ಷಕ ದಳದ ಉಪ ಸಮಾದೇಷ್ಟ ರಮೇಶ್ ಅವರು 2017ರ ಸ್ವಾತಂತ್ರ ದಿನಾಚರಣೆ ಸಂದರ್ಭ ನೀಡುವ ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿದ್ದರು. ಸೇವಾ ದಕ್ಷತೆ, ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಪರಿಗಣಿಸಿ ಅವರನ್ನು ಪ್ರತಿಷ್ಠಿತ ರಾಷ್ಟ್ರಪತಿ ಪದಕಕ್ಕೆ ಆಯ್ಕೆ ಮಾಡಲಾಗಿತ್ತು. ಗೃಹರಕ್ಷಕದಳ ಹಾಗೂ ಅಗ್ನಿಶಾಮಕದಳದಲ್ಲಿ ಪದಕ ಪಡೆದ ಅಧಿಕಾರಿಗಳಿಗೆ ಪ್ರತ್ಯೇಕ ದಿನ ಪದಕ ಪ್ರದಾನ ನಡೆಯಲಿದ್ದು, ರಮೇಶ್ ಅವರಿಗೆ ದಿನಾಂಕದ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಾಗಿದೆ.

ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾದವರಿಗೆ ರಾಜಭವನದಲ್ಲಿ ರಾಜ್ಯಪಾಲರು ಪದಕ ಪ್ರದಾನ ಮಾಡುವುದು ವಾಡಿಕೆ. ಆದರೆ 2016ರ ಬಳಿಕ ಪದಕ ಪ್ರದಾನ ಆಗಿರಲಿಲ್ಲ. ಮೂರು ವರ್ಷ ಬಾಕಿಯಾಗಿರುವ ಪದಕಗಳನ್ನು ಜು.5ರಂದು ರಾಜ್ಯಪಾಲ ವಜೂಬಾಯಿ ರುಢಾಬಾಯಿ ವಾಲ ಅವರು ಪ್ರದಾನ ಮಾಡಲಿದ್ದಾರೆ.

2018ರ ಬಳಿಕ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ ದಿನಾಚರಣೆ ಸಂದರ್ಭ ರಾಷ್ಟ್ರಪತಿ ಪದಕ ಪಡೆದವರಿಗೆ ಹೊಸದಿಲ್ಲಿಯಲ್ಲಿ ರಾಷ್ಟ್ರಪತಿಯವರೇ ನೇರ ಪದಕ ಪ್ರದಾನ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News