ಮಂಗಳೂರಿನಲ್ಲಿ ಡೆಂಗ್ ಹಾವಳಿ: ಜನರಲ್ಲಿ ಆತಂಕ

Update: 2019-06-23 16:24 GMT

ಮಂಗಳೂರು, ಜೂ23: ನಗರದಲ್ಲಿ ಹೆಚ್ಚಾಗುತ್ತಿರುವ ಡೆಂಗ್ ಜ್ವರ ಜನರಲ್ಲಿ ಆತಂಕ ಉಂಟು ಮಾಡಿದೆ.

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸಂಬಂಧಿಸಿ ಜಿಲ್ಲಾ ಆರೋಗ್ಯ ಇಲಾಖೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿರುವ ಹೊರತಾಗಿಯೂ ಮಲೇರಿಯಾ, ಡೆಂಗ್ ನಂತಹ ರೋಗಗಳ ವರದಿಯಲ್ಲಿ ಮಂಗಳೂರು ಸೇರಿಕೊಂಡಿರುವುದು, ಜನಸಾಮಾನ್ಯರಲ್ಲಿ ಆತಂಕ ಸೃಷ್ಟಿಸಿದೆ.

ನಗರದ ಗೋರಕ್ಷಕ ದಂಡು ಮತ್ತು ಅರೆಕೆರೆಬೈಲಿನಲ್ಲಿ ಡೆಂಗ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ದ.ಕ.ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆಗೆ ಇಳಿದು ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ತಿಳಿಸಿದ್ದಾರೆ.

ಮಂಗಳೂರಿನ ಗುಜ್ಜರಕೆರೆಯ ಗೋರಕ್ಷಕದಂಡು ಹಾಗೂ ಅರೆಕರೆಬೈಲಿನಲ್ಲಿ 45ಕ್ಕೂ ಅಧಿಕ ಡೆಂಗ್ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದರು. ಪ್ರದೇಶದ ಸುತ್ತಮುತ್ತಲಿನ ಭಾಗದಲ್ಲಿ ಈಗಾಗಲೇ ಫಾಗಿಂಗ್ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ಜತೆಗೆ ಜಾಗೃತಿ ನೀಡುವ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗಿದೆ. ವಿಶೇಷವಾಗಿ ಜನತೆ ಸ್ವಚ್ಛತೆ ಕಡೆಗೆ ಗಮನ ನೀಡುವಂತೆ ಅವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಎಂದು ಅವರು ತಿಳಿಸಿದರು.

ಸ್ವಚ್ಛತೆಯ ವಿಚಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮುಖ್ಯವಾಗಿ ಮಳೆಯ ನೀರು ಅಸುಪಾಸಿನಲ್ಲಿ ನಿಲ್ಲುತ್ತಿದೆ. ಇದರಿಂದ ಇಂತಹ ಡೆಂಗ್ ಕಾಯಿಲೆ ಹರಡುವ ಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ಹೆಚ್ಚಿನ ಮಾಹಿತಿ ನೀಡುವ ಅಗತ್ಯವಿದ್ದು ಅದನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ.

ಜೂ. 24ರಂದು ಆರೋಗ್ಯ ತಪಾಸಣೆ

ದ.ಕ. ಜಿಲ್ಲಾ ಆರೋಗ್ಯ ಇಲಾಖೆಯಿಂದ ಗುಜ್ಜರಕೆರೆ ವ್ಯಾಪ್ತಿಯ ಗೋರಕ್ಷಕದಂಡು ಹಾಗೂ ಅರೆಕರೆಬೈಲಿ ಪ್ರದೇಶದಲ್ಲಿ ಜೂ.24ರಂದು ಆರೋಗ್ಯ ತಪಾಸಣೆ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ತಿಳಿಸಿದರು.

‘ವಾರ್ತಾಭಾರತಿ’ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಆರೋಗ್ಯ ತಪಾಸಣೆ ಶಿಬಿರದಲ್ಲಿ ರಕ್ತ ಪರೀಕ್ಷೆ ಸೇರಿದಂತೆ ವಿವಿಧ ಎಲ್ಲ ರೀತಿಯ ಆರೋಗ್ಯ ತಪಾಸಣೆ ಕಾರ್ಯ ನಡೆಯಲಿದೆ. ಶಿಬಿರದಲ್ಲಿ ಡೆಂಗ್ ಹಾವಳಿ ತಪ್ಪಿಸುವ ಜಾಗೃತಿಯನ್ನೂ ಮೂಡಿಸಲಾಗುವುದು. ಜತೆಗೆ ಫೀಲ್ಡ್ ಆಫೀಸರ್‌ಗಳು ಮನೆಮನೆಗೆ ತೆರಳಿ ಜಾಗೃತಿ ಮೂಡಿಸಲಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News