ಸಿಡ್ನಿಯಲ್ಲಿ ಪರ್ಸ್ ಕದ್ದ ಆರೋಪ: ಏರ್ ಇಂಡಿಯಾ ಪೈಲೆಟ್ ಅಮಾನತು

Update: 2019-06-23 16:37 GMT

ಹೊಸದಿಲ್ಲಿ, ಜೂ. 22: ಸಿಡ್ನಿ ವಿಮಾನ ನಿಲ್ದಾಣದಲ್ಲಿರುವ ಸುಂಕ ಮುಕ್ತ ಅಂಗಡಿಯಿಂದ ಪರ್ಸ್ ಕಳವುಗೈದ ಆರೋಪದಲ್ಲಿ ಏರ್ ಇಂಡಿಯಾ ತನ್ನ ಪೂರ್ವ ವಲಯದ ಪ್ರಾದೇಶಿಕ ನಿರ್ದೇಶಕ ರೋಹಿತ್ ಭಾಸಿನ್ ಅವರನ್ನು ಅಮಾನತುಗೊಳಿಸಿದೆ.

‘‘ತನ್ನ ಓರ್ವ ಪೈಲೆಟ್ ಹಾಗೂ ಪ್ರಾದೇಶಿಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರೋಹಿತ್ ಭಾಸಿನ್ ಸಿಡ್ನಿಯಲ್ಲಿರುವ ಸುಂಕ ಮುಕ್ತ ಅಂಗಡಿಯಿಂದ ಪರ್ಸ್ ಕಳವುಗೈದಿದ್ದಾರೆ ಎಂಬ ಮಾಹಿತಿ ಇದೆ. ಏರ್ ಇಂಡಿಯಾ ಈ ಘಟನೆ ಬಗ್ಗೆ ತನಿಖೆ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ರೋಹಿತ್ ಭಾಸಿನ್ ಅವರನ್ನು ಅಮಾನತಿನಲ್ಲಿ ಇರಿಸಲಾಗಿದೆ’’ ಎಂದು ಏರ್ ಇಂಡಿಯಾದ ವಕ್ತಾರ ತಿಳಿಸಿದ್ದಾರೆ.

‘‘2019 ಜೂನ್ 22ರಂದು ಏರ್ ಇಂಡಿಯಾ 301 ವಿಮಾನ ನಿರ್ಗಮಿಸುವ ಮುನ್ನ ಸಿಡ್ನಿ ವಿಮಾನ ನಿಲ್ದಾಣದಲ್ಲಿರುವ ಸುಂಕ ರಹಿತ ಅಂಗಡಿಯಿಂದ ನೀವು ಪರ್ಸ್ ಕಳವುಗೈದಿದ್ದೀರಿ ಎಂದು ಏರ್ ಇಂಡಿಯಾದ ಪ್ರಾದೇಶಿಕ ಮ್ಯಾನೇಜರ್ ವರದಿ ಮಾಡಿದ್ದಾರೆ’’ ಎಂದು ರೋಹಿತ್ ಭಾಸಿನ್‌ಗೆ ನೀಡಿದ ಅಮಾನತು ಆದೇಶದಲ್ಲಿ ಏರ್ ಇಂಡಿಯಾ ಹೇಳಿದೆ.

‘‘ಯಾವುದೇ ಪೂರ್ವಾಗ್ರಹವಿಲ್ಲದೆ ನಿಮ್ಮ ವಿರುದ್ಧ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ತತ್‌ಕ್ಷಣ ಅನುಷ್ಠಾನಕ್ಕೆ ಬರುವಂತೆ ನಿಮ್ಮನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ’’ ಎಂದು ಆದೇಶದಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News