ಮಂಗಳೂರು-ಮೀರಜ್ ರೈಲು ಓಡಾಟ ಶೀಘ್ರ ಪುನರಾರಂಭ- ಸಂಸದ ನಳಿನ್

Update: 2019-06-23 17:39 GMT

ಪುತ್ತೂರು: ಮಂಗಳೂರು-ಮಿರಜ್ ನಡುವಣ ಮೀಟರ್‍ಗೇಜ್ ಹಳಿಗಳ ಸಂದರ್ಭದಲ್ಲಿ ಓಡಾಟ ನಡೆಸುತ್ತಿದ್ದ ಪ್ರಯಾಣಿಕ ರೈಲು ಬಂಡಿಯನ್ನು ನಂತರ ನಿಲುಗಡೆ ಗೊಳಿಸಲಾಗಿತ್ತು. ಇದೀಗ ಮಂಗಳೂರು-ಮಿರಜ್ ಪ್ರಯಾಣಿಕ ರೈಲು ಬಂಡಿಯ ಆರಂಭಕ್ಕೆ ಪ್ರಯತ್ನಗಳನ್ನು ನಡೆಸಲಾಗಿದ್ದು, ಶೀಘ್ರವಾಗಿ ಈ ರೈಲು ಬಂಡಿಯ ಓಡಾಟ ಪುನಾರರಂಭವಾಗಲಿದೆ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ರವಿವಾರ ಪುತ್ತೂರಿನಲ್ಲಿ ಪತ್ರಕರ್ತರ ಜೊತೆ ಮಾತನಾಡಿ ಜಿಲ್ಲೆಯ ರೈಲ್ವೇ ಸಂಪರ್ಕ ವ್ಯವಸ್ಥೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಮಂಗಳೂರು-ಗುರುವಾಯೂರು, ಸುಬ್ರಹ್ಮಣ್ಯ ರಸ್ತೆ-ಕೊಲ್ಲೂರು, ಮಂಗಳೂರು-ತಿರುಪತಿ ನಡುವಣ ನೂತನ ರೈಲುಬಂಡಿಗಳ ಆರಂಭಕ್ಕೆ ರೈಲ್ವೇ ಸಚಿವರಿಗೆ ಪ್ರಸ್ತಾವನೆ ಸಲ್ಲಸಿದ್ದೇನೆ. ರೈಲ್ವೇ ಸಚಿವರನ್ನು ಭೇಟಿ ಮಾಡಿ ದ.ಕ.ಜಿಲ್ಲೆಯಿಂದ ಹೊರ ರಾಜ್ಯಗಳ ತೀರ್ಥಕ್ಷೇತ್ರಗಳಿಗೆ, ವಾಣಿಜ್ಯ ಪಟ್ಟಣಗಳಿಗೆ ರೈಲು ಸಾರಿಗೆ ಕಲ್ಪಿಸುವಂತೆ ಒತ್ತಾಯಿಸುತ್ತೇನೆ ಎಂದರು.

ಪುತ್ತೂರು ಎಪಿಎಂಸಿ ಸಂಪರ್ಕ ರಸ್ತೆಯಲ್ಲಿನ ರೈಲ್ವೇ ಗೇಟ್‍ಗೆ ಪರ್ಯಾಯವಾಗಿ ಶೇ. 50ರ ಅನುದಾನದಲ್ಲಿ ತಳ ಸೇತುವೆ ನಿರ್ಮಾಣವಾಗಲಿದೆ. ವಿವೇಕಾನಂದ ಕಾಲೇಜ್ ರಸ್ತೆಯ ಅಗಲ ಕಿರಿಯದಾದ ರೈಲ್ವೇ ಮೇಲ್ಸೇತುವೆಗೆ ಪರ್ಯಾಯವಾಗಿ ನೂತನ ಸೇತುವೆ ನಿರ್ಮಾಣ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಲು ಪ್ರಯತ್ನ ಮಾಡಲಾಗುವುದು. ಆಯಾ ದೇವಾಲಯಗಳಿಗೆ ಸಂಬಂಧಿಸಿದಂತೆ ಕೆಲವೊಂದು ಧಾರ್ಮಿಕ ಶಿಷ್ಠಾಚಾರಗಳಿರುತ್ತವೆ. ಇದನ್ನು ಆಚರಣೆ ಮತ್ತು ಸಂಪ್ರದಾಯ ಎಂದು ಕರೆಯುತ್ತೇವೆ. ಪ್ರಸಿದ್ಧ ಯಾತ್ರ ಕ್ಷೇತ್ರ ಶ್ರೀ ಶಬರಿಮಲೆಗೆ ಹತ್ತಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರು ಮತ್ತು 50 ವಯಸ್ಸು ದಾಟಿದ ಮಹಿಳೆಯರು ಪ್ರವೇಶಿಸಲು ಹಿಂದಿನಿಂದಲೂ ಅವಕಾಶವಿದೆ. ಬಿಜೆಪಿಯು ಈ ಸಂಪ್ರದಾಯವನ್ನು ಬೆಂಬಲಿಸುತ್ತದೆ. ನಂಬಿಕೆಯ ವಿರುದ್ಧವಾಗಿ ಬಿಜೆಪಿ ನಡೆದು ಕೊಳ್ಳುವುದಿಲ್ಲ ಎಂದು ನಳೀನ್ ಹೇಳಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಮಾಧ್ಯಮ ವಕ್ತಾರ ಆರ್.ಸಿ. ನಾರಾಯಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News