ಸಮ್ಮಿಶ್ರ ಸರ್ಕಾರ ಜನರ, ರೈತರ ವಿರೋಧಿ: ಶೋಭಾ ಕರಂದ್ಲಾಜೆ

Update: 2019-06-23 17:41 GMT

ಪುತ್ತೂರು: ರಾಜ್ಯ ಸಮ್ಮಿಶ್ರ ಸರ್ಕಾರವು ಜನರ ಹಾಗೂ ರೈತರ ವಿರೋಧಿಯಾಗಿದ್ದು, ಜನರ ಬಗ್ಗೆ ಕಾಳಜಿಯಿಲ್ಲದ ಕುಮಾರ ಸ್ವಾಮಿ ನೇತೃತ್ವದ ಸರ್ಕಾರ ಹೋದಲ್ಲಿ ಮಾತ್ರ ಜನರಿಗೆ ನೆಮ್ಮದಿ ಸಿಗಲಿದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ರವಿವಾರ ಪುತ್ತೂರಿನ ತೆಂಕಿಲದಲ್ಲಿರುವ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆದ ಪುತ್ತೂರಿನ ಸಂಸದರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಕಳೆದ 5 ವರ್ಷಗಳಲ್ಲಿ ಎನ್‍ಡಿಎ ಸರಕಾರವು ಅತೀವೃಷ್ಟಿ ಹಾಗೂ ಅನಾವೃಷ್ಟಿಗೆ ರೂ. 7,182 ಕೋಟಿಯನ್ನು ನೀಡಿರುತ್ತದೆ. ಆದರೆ ಯುಪಿಎ ಸರಕಾರದ ಅವಧಿಯಲ್ಲಿ ಕೇವಲ ರೂ. 4 ಸಾವಿರ ಕೋಟಿ ಮಾತ್ರ ನೀಡಿರುತ್ತದೆ. ಯುಪಿಎ ಸರಕಾರದ ಅವಧಿಯಲ್ಲಿ ಯಾವುದೇ ರೀತಿಯ ಸೈನಿಕರಿಗೆ ಬೇಕಾದ ಶಸ್ತ್ರಗಳನ್ನು ನೀಡಿರುವುದಿಲ್ಲ ಎಂಬುದು ರಕ್ಷಣಾ ಇಲಾಖೆಯ ದಾಖಲೆಗಳನ್ನು ತೆಗೆದು ನೋಡಿದರೆ ಕಂಡು ಬರುತ್ತಿದೆ. ಆದರೆ ಕಳೆದ 5 ವರ್ಷಗಳಲ್ಲಿ ಮೋದಿ ಸರಕಾರವು ಸೈನಿಕರ ಭದ್ರತೆಗೆ ಅನೇಕ ಉಪಕರಣಗಳನ್ನು ನೀಡಿವೆ. ಅಲ್ಲದೇ ಸಶಸ್ತ್ರಗಳನ್ನೂ ನೀಡಿ ಸೈನಿಕರ ಭದ್ರತೆಯನ್ನು ಉತ್ತಮ ರೀತಿಯಲ್ಲಿ ಕಾಪಾಡಿದೆ. ಮೋದಿ ಸರಕಾರವು ದೇಶದ ಸೈನಿಕರ ಪರವಾಗಿ ಕೆಲಸ ಮಾಡಿರುತ್ತದೆ ಎಂದರು.

ಭಾರತೀಯ ಜನತಾ ಪಕ್ಷವೂ ಹರಿಯುತ್ತಿರುವ ನೀರಿನಂತೆ ಶುಭ್ರವಾಗಿದೆ.  ಕಳೆದ 5 ವರ್ಷದಲ್ಲಿ ಭ್ರಷ್ಟಚಾರವಿಲ್ಲದೇ ಕೇಂದ್ರದಲ್ಲಿ ಆಡಳಿತ ನಡೆಸಿಕೊಂಡು ಬಂದಿರುತ್ತದೆ. ಈ  ಹಿಂದೆ ಭಾರತದವೂ ಸಂಪ್ರದಾಯದ ದೇಶವೆಂದು ಯಾವ ದೇಶವೂ ಭಾರತದೊಂದಿಗೆ ಇರಲ್ಲಿಲ್ಲ. ಪ್ರಪಂಚದ ವಿವಿಧ ದೇಶಗಳು ಭಾರತದ ಪರವಾಗಿರುವುದಕ್ಕೆ ಮೋದಿಯೇ ಕಾರಣವಾಗಿದ್ದು, ಇಂದು ಭಾರತ ಮೇಲ್‍ಸ್ಥಾನಕ್ಕೆ ಹೋಗಲು ಹಾಗೂ ವಿದೇಶದಲ್ಲಿ ಗೌರವ ಪಡೆಯಲು ಪ್ರಧಾನಿ ಮೋದಿ ಕಾರಣರಾಗಿದ್ದಾರೆ ಎಂದರು.

ಸಂಸದ ನಳೀನ್ ಕುಮಾರ್ ಕಟೀಲ್ ಮಾತನಾಡಿ ಹಿಂದೆ ಭಾರತ ದೇಶದೊಂದಿಗೆ ಯಾವ ದೇಶವೂ ಇರಲ್ಲಿಲ್ಲ. ಆದರೆ ಇಂದು ಭಾರತವು ಜಗದ್ಗುರು ಸ್ಥಾನದಲ್ಲಿದೆ. ಅದಕ್ಕೆ ಕಾರಣವೇ ಪ್ರಧಾನಿ ಮೋದಿ. ಪ್ರಧಾನಿ ಮೋದಿಯ ಸಾಧನೆಗೆ ಜನರು ಪ್ರಶಂಸೆ ನೀಡಿ ಮತ್ತೊಮ್ಮೆ ಮೋದಿ ಸರಕಾರಕ್ಕೆ ಬೆಂಬಲ ನೀಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮತದಾರರೂ ಕೂಡ ಕಾರ್ಯಕರ್ತರಾಗಿ ದುಡಿದಿದ್ದಾರೆ. ಹಾಗಾಗಿ ಮತದಾರರಿಗೂ ಕಾರ್ಯಕರ್ತರಿಗೂ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು. 

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಕೇಂದ್ರ ಸರಕಾರದಿಂದ ರೈತರಿಗೆ, ಬಡ ಜನರಿಗೆ ಅನೇಕ ಯೋಜನೆಗಳನ್ನು ಅನುಷ್ಠಾನ ಮಾಡಿದರೂ, ರಾಜ್ಯ ಸರಕಾರದಿಂದ ಅನುಷ್ಠಾನವಾಗುತ್ತಿಲ್ಲ. ಇಲ್ಲಿಂದ ರೈತರು ಅವರಿಗೆ ಸಿಗುವಂತಹ ಯೋಜನೆಗಳಿಗೆ ಅರ್ಜಿಸಲ್ಲಿಸಿದರೆ, ನಮ್ಮ ರಾಜ್ಯ ಸರಕಾರವು ಅದನ್ನು ಕಳುಹಿಸುತ್ತಿಲ್ಲ. ಇದನ್ನು ಸರಿ ಪಡಿಸಬೇಕಾದರೆ ಬೂತ್ ಮಟ್ಟದ ಕಾರ್ಯಕರ್ತರು ತಮ್ಮ ತಮ್ಮ ಗ್ರಾಮ ಪಂಚಾಯತ್‍ಗಳಿಂದಲೇ ಪ್ರಶ್ನೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಪುತ್ತೂರು ಮೂಲದ ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಶೋಭಾ ಕರಂದ್ಲಾಜೆಗೆ ಸನ್ಮಾನಿಸಿ ಗೌರವಿಸ ಲಾಯಿತು ಹಾಗೂ ಲೋಕಸಭಾ ಚುನಾವಣೆಗೆ ದುಡಿದ ಬೂತ್ ಮಟ್ಟದ ಅಧ್ಯಕ್ಷರನ್ನು ಹಾಗೂ ಕಾರ್ಯದಶಿಯನ್ನು ಅಭಿನಂದಿಸಲಾಯಿತು.

ಮಾಜಿ ಬಿಜೆಪಿ ನಗರ ಮಂಡಲ ಅಧ್ಯಕ್ಷರಾಗಿದ್ದ ಮುಗರೋಡಿ ಬಾಲಕೃಷ್ಣ ರೈ ಮತ್ತು ಗೋಪಾಲಕೃಷ್ಣ ಹೇರಳೆಯನ್ನು ಗೌರವಿಸಲಾಯಿತು. 
ವೇದಿಕೆಯಲ್ಲಿ ಶಾಸಕ ಸಂಜೀವ ಮಠಂದೂರು, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆಧು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಉಪಸ್ಥಿತರಿದ್ದರು.

ಪುತ್ತೂರು ನಗರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿದರು. ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಕೆ. ಜೀವಂಧರ್ ಜೈನ್ ವಂದಿಸಿದರು. ರಾಜೇಶ್ ಬನ್ನೂರು ಹಾಗೂ ಚಂದ್ರಶೇಖರ್ ಬಪ್ಪಳಿಗೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News