ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ: ಕಡಲ ಕಿನಾರೆಯಲ್ಲಿ ತಡಬೇಲಿ

Update: 2019-06-24 13:13 GMT

ಮಲ್ಪೆ, ಜೂ.24: ಮಳೆಗಾಲ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಬೀಚ್‌ಗಳಲ್ಲಿ ಕಡಲಿನ ಅಬ್ಬರ ತೀವ್ರಗೊಂಡಿವೆ. ತೀರದಲ್ಲಿ ಅಲೆಗಳ ಆರ್ಭಟ ಅಪಾಯಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿಯ ದಂತೆ ಕಟ್ಟೆಚ್ಚರ ವಹಿಸಲು ಉಡುಪಿ ಜಿಲ್ಲೆಯಾದ್ಯಂತ ಇರುವ ಹಲವು ಬೀಚ್ ಗಳಲ್ಲಿ ಹೆಚ್ಚುವರಿ ಪ್ರವಾಸಿ ಮಿತ್ರರನ್ನು ನಿಯೋಜಿಸಲಾಗಿದೆ.

ಬೀಚ್‌ಗೆ ಆಗಮಿಸುವ ಪ್ರವಾಸಿಗರು ಯಾವುದೇ ಅಪಾಯವನ್ನು ಲೆಕ್ಕಿಸದೆ ಸಮುದ್ರಕ್ಕೆ ಇಳಿದು ಆಟವಾಡುತ್ತಿದ್ದಾರೆ. ಈಗಾಗಲೇ ನೇಮಿಸಿರುವ ಹೋಮ್ ಗಾರ್ಡ್‌ಗಳ ಕಣ್ಣು ತಪ್ಪಿಸಿ ನೀರಿನ ಆಟ ಆಡುತ್ತಿರುವುದು ಕೆಲವು ಕಡೆಗಳಲ್ಲಿ ಕಂಡುಬರುತ್ತಿವೆ. ಈಗ ಸಮುದ್ರದಲ್ಲಿ ಈಜಾಡುವುದು, ಸ್ನಾನ ಮಾಡುವುದು ಹಾಗೂ ನೀರಿಗೆ ಇಳಿಯುವುದು ಅಪಾಯಕಾರಿಯಾಗಿರುವುದರಿಂದ ಪ್ರವಾಸಿಗರ ರಕ್ಷಣೆಗೆ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಕ್ರಮ ಕೈಗೊಂಡಿವೆ.

ಮಳೆಗಾಲದಲ್ಲಿ ಪ್ರವಾಸಿಗರು ಬೀಚ್‌ಗಳಿಗೆ ಆಗಮಿಸಲು ಅವಕಾಶ ಕಲ್ಪಿಸ ಲಾಗಿದ್ದರೂ ನೀರಿಗೆ ಇಳಿದು ಆಟ ಆಡುವುದನ್ನು ನಿಷೇಧಿಸಲಾಗಿದೆ. ಅಪಾಯ ಕಾರಿ ಪ್ರದೇಶಗಳಲ್ಲಿ ಪ್ರವಾಸಿಗಳು ನೀರಿಗೆ ಇಳಿಯದಂತೆ ಕಟ್ಟೆಚ್ಚರ ವಹಿಸಲು ಲೈಫ್ ಗಾರ್ಡ್, ಹೋಮ್‌ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಪ್ರಸ್ತುತ ಜಿಲ್ಲೆಯ ವಿವಿಧ ಬೀಚ್‌ಗಳಲ್ಲಿ ಒಟ್ಟು 10 ಮಂದಿ ಪ್ರವಾಸಿ ಮಿತ್ರರಿದ್ದು ಮಳೆಗಾಲದಲ್ಲಿ ಹೆಚ್ಚುವರಿ 10 ಮಂದಿ ಪ್ರವಾಸಿ ವಿುತ್ರರನ್ನು ನೇಮಕ ಮಾಡಲಾಗಿದೆ.

ಮಲ್ಪೆ ಬೀಚ್‌ನಲ್ಲಿ 7, ಕಾಪು ಬೀಚ್‌ನಲ್ಲಿ 4, ಪಡುಬಿದ್ರಿ ಬೀಚ್‌ನಲ್ಲಿ 4, ಮರವಂತೆ ಬೀಚ್‌ನಲ್ಲಿ 4 ಹಾಗೂ ಶಿರೂರು ಬೀಚ್‌ನಲ್ಲಿ ಒಬ್ಬ ಪ್ರವಾಸಿ ಮಿತ್ರರಿದ್ದಾರೆ. ಬೆಳಗ್ಗೆ 10ರಿಂದ ಸಂಜೆ 7ಗಂಟೆಯವರೆಗೆ ಕರ್ತವ್ಯ ನಿರ್ವಹಿಸುವ ಇವರು, ಪ್ರವಾಸಿಗರು ಸಮುದ್ರದ ನೀರಿಗೆ ಇಳಿಯದಂತೆ ಎಚ್ಚರ ವಹಿಸುತ್ತಿದ್ದಾರೆ. ಇವರೊಂದಿಗೆ ಸ್ಥಳೀಯ ಜೀವರಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವಾಸಿಗರನ್ನು ಎಚ್ಚರಿಸುವ ಜತೆಗೆ ಅಪಾಯದಲ್ಲಿ ಸಿಲುಕಿದವರನ್ನು ರಕ್ಷಿಸುವ ಕೆಲಸ ಕೂಡ ಇವರು ಮಾಡುತ್ತಿದ್ದಾರೆ.

ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರಿಗೆ ಎಚ್ಚರಿಕೆ ನೀಡುವ ಫಲಕವನ್ನು ಅಳವಡಿಸಲಾಗಿದ್ದು, ಬೀಚ್ ಅಭಿವೃದ್ದಿ ಸಮಿತಿಯಿಂದ ಬೀಚ್ ಉದ್ದಕ್ಕೂ ಸುಮಾರು ಒಂದು ಕಿ. ಮೀ. ದೂರದವರೆಗೆ ತಡೆಬೇಲಿಯನ್ನು ಹಾಕಿ ಸುಮಾರು 40 ಕೆಂಪು ಬಾವುಟಗಳನ್ನು ಹಾರಿಸಲಾಗಿದೆ. ಈ ಬೇಲಿಯನ್ನು ದಾಟಿ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಆದರೂ ಹೊರಜಿಲ್ಲೆಯ, ಮಲೆನಾಡು ಪ್ರದೇಶದಿಂದ ಬಂದ ಪ್ರವಾಸಿಗರು ಮಲ್ಪೆ ಬೀಚ್‌ನಲ್ಲಿ ನಿಯಮವನ್ನು ಉಲ್ಲಂಸಿ ಸಮುದ್ರಕ್ಕೆ ಇಳಿದು ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ ಎನ್ನುತ್ತಾರೆ ಸಮಿತಿಯ ಸದಸ್ಯ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.

ಮಳೆಗಾಲದಲ್ಲಿ ಸಮುದ್ರ ಅಲೆಗಳ ಅಬ್ಬರ ಜೋರಾಗಿರುವುದರಿಂದ ಪ್ರವಾಸಿಗರು ನೀರಿಗೆ ಇಳಿಯುವುದನ್ನು ನಿರ್ಬಂಧಿಸಲಾಗಿದೆ. ಆದುದರಿಂದ ಪ್ರವಾಸಿಗರು ಈಗಾಗಲೇ ಬೀಚ್‌ಗಳಲ್ಲಿ ನಿಯೋಜಿಸಿರುವ ಲೈಫ್ ಗಾರ್ಡ್ ಮತ್ತು ಹೋಮ್‌ಗಾರ್ಡ್ ಸಿಬಂದಿಗಳು ನೀಡುವ ಸೂಚನೆ ಪಾಲಿಸಬೇಕು.
-ನಿಶಾ ಜೇಮ್ಸ್, ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News