ಕಾಟಚಾರಕ್ಕೆ ಕಾರ್ಯಕ್ರಮ ಮಾಡಬೇಡಿ: ಕೃಷಿ ಅಭಿಯಾನದ ಉದ್ಘಾಟನೆಯ ದಿನವೇ ರೈತರಿಂದ ಅಪಸ್ವರ

Update: 2019-06-24 14:46 GMT

ಬಂಟ್ವಾಳ, ಜೂ. 24: ಕೃಷಿ ಇಲಾಖೆಯ ವತಿಯಿಂದ 10 ದಿನಗಳ ಕಾಲ ತಾಲೂಕು ವ್ಯಾಪ್ತಿಯಲ್ಲಿ ನಡೆಯಲಿರುವ ಕೃಷಿ ಅಭಿಯಾನಕ್ಕೆ ಉದ್ಘಾಟನೆಯ ದಿನವೇ ರೈತರಿಂದ ಅಪಸ್ವರ ಕೇಳಿ ಬಂದಿದೆ. "ಕಾಟಚಾರಕ್ಕೆ  ಕಾರ್ಯಕ್ರಮ ಮಾಡಬೇಡಿ" ಎಂದು ಕೃಷಿಕರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮುಂದೆ ಭಿನ್ನವಿಸಿಕೊಂಡರು. 

ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಕೃಷಿ ಅಭಿಯಾನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಸೋಮವಾರ ಬೆಳಿಗ್ಗೆ ಬಿ.ಸಿ.ರೋಡಿನಲ್ಲಿರುವ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದಿದ್ದು, ಈ ಸಂದರ್ಭ ಸಭಾಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಕೃಷಿಕ, ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಸರಪಾಡಿ ಮಾತನಾಡಿ, ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಎಂದು ಕಾರ್ಯಕ್ರಮ ಆಯೋಜಿಸುವಾಗ ರೈತರ ಮನೆ ಬಾಗಿಲಿಗೆ ಹೋಗಬೇಕು. ರೈತರಿಗೆ ಏನೇನು ಸಮಸ್ಯೆಗಳಿವೆ?. ಇದಕ್ಕೆ ಹೇಗೆ ಸ್ಪಂದಿಸಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು. ಹೊರತು ಒಂದು ವಾಹನದಲ್ಲಿ ಮೈಕ್ ಕಟ್ಟಿಕೊಂಡು ಹೋಗುವುದರಿಂದ ರೈತರಿಗೆ ಏನು ಪ್ರಯೋಜನವಿಲ್ಲ, ರೈತರ ಹೆಸರನ್ನು ಬಳಸಿಕೊಂಡು ಈ ಕಾರ್ಯಕ್ರಮ ನಡೆಸುವುದು ಸಮಂಜಸವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಶೋಕ್‍ಶೆಟ್ಟಿ ಸರಪಾಡಿ ಅವರ ಮಾತಿಗೆ ತನ್ನ ಅಧ್ಯಕ್ಷೀಯ ಮಾತಿನಲ್ಲಿ ಧ್ವನಿಗೂಡಿಸಿದ ಶಾಸಕ ರಾಜೇಶ್ ನಾಯ್ಕ್ ಆಮಂತ್ರಣ ಪತ್ರಿಕೆಯಲ್ಲಿ ನಿರಂತರ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೀರಿ, ಅಭಿಯಾನದ ವಾಹನ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಕನಿಷ್ಠ ಅರ್ಧಗಂಟೆ ಬೇಕು. ಇದನ್ನು ಹೇಗೆ ನಿಭಾಯಿಸುತ್ತೀರಿ? ಎಂದು ಕೃಷಿ ಅಧಿಕಾರಿ ನಾರಾಯಣ ಶೆಟ್ಟಿ ಅವರನ್ನು ಪ್ರಶ್ನಿಸಿದರು.

ಮೂರು ದಿವಸದಲ್ಲಿ ಮುಗಿಸಬೇಕೆಂದು ಕಾಟಚಾರದ ಕಾರ್ಯಕ್ರಮವನ್ನು ಮಾಡಬೇಡಿ, ಇದೇನು ವಾಹನವನ್ನು ಸುತ್ತಾಡಿಸಿ, ಇಂಧನ ವ್ಯಯ ಮಾಡುವ ಕಾರ್ಯಕ್ರಮವೇ? ಅಥವಾ ರೈತರಿಗೆ ಉಪಯೋಗವಾಗುವ ಕಾರ್ಯಕ್ರಮವೇ ಎಂದು ಪ್ರಶ್ನಿಸಿದ ಅವರು, ಈ ಆಮಂತ್ರಣ ಪತ್ರಿಕೆಯನ್ನು ನೋಡಿದಾಗಲೇ ಇದು ಬೋಗಸ್ ಕಾರ್ಯಕ್ರಮವೆನ್ನುವುದು ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಅಧಿಕಾರಿ ನೀಡಿದ ವರದಿಯೂ ಅಪೂರ್ಣವಾಗಿದ್ದು, ಯಾವುದೇ ಅಂಕಿ ಅಂಶಗಳನ್ನು ಅದರಲ್ಲಿ ಉಲ್ಲೇಖಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಮೂರು ದಿವಸದಲ್ಲಿ ಮುಗಿಸಬೇಕು ಎನ್ನುವ ಆತುರದಲ್ಲಿ ರೈತರ ಹೆಸರಿಟ್ಟುಕೊಂಡು ಸರಕಾರದ ಹಣ ದುಂದು ವೆಚ್ಚ ಮಾಡುವುದನ್ನು ನಾನು ಒಪ್ಪುವುದಿಲ್ಲ ಎಂದು ಗರಂ ಆದ ಶಾಸಕ ರಾಜೇಶ್ ನಾಯ್ಕ್, ಮುಂದಿನ ದಿನಗಳಲ್ಲಿ ಆಯ್ದ ಕಡೆಗಳಲ್ಲಿ ಅಥವಾ ಎರಡು ಮೂರು ಪಂಚಾಯತ್‍ಗಳನ್ನು ಒಟ್ಟು ಸೇರಿಸಿ ರೈತರಿಗೆ ಉಪಯೋಗವಾಗುವ ಕಾರ್ಯಕ್ರಮ ಮಾಡಿ ಎಂದು ಸಲಹೆ ನೀಡಿದರು. 

ವೇದಿಕೆಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೆರ, ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಯು.ಪಿ. ಇಬ್ರಾಹಿಂ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರಾ, ಜಿಪಂ ಸದಸ್ಯರಾದ ತುಂಗಪ್ಪ ಬಂಗೇರ, ರವೀಂದ್ರ ಕಂಬಳಿ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಕೃಷಿಕ ಸಮಾಜದ ಅಧ್ಯಕ್ಷ ಅಶೋಕ್ ಕುಮಾರ್ ಬರಿಮಾರು, ಇಒ ರಾಜಣ್ಣ ಮೊದಲಾದವರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News