ಪುತ್ತೂರು: ಕೊಳೆತ ಹಣ್ಣು ಮಾರಾಟ; ದೂರು

Update: 2019-06-24 14:55 GMT

ಪುತ್ತೂರು: ನಗರದ ಮುಖ್ಯರಸ್ತೆಯ ಬದಿ ಫುಟ್‍ಪಾತ್‍ನಲ್ಲಿರುವ ಹಣ್ಣಿನ ಅಂಗಡಿಗಳಲ್ಲಿ ಗ್ರಾಹಕರಿಗೆ ವಂಚಿಸಿ ಕೊಳೆತ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿರುವ ಕುರಿತ ಸಾರ್ವಜನಿಕ ದೂರಿನ ಮೇರೆಗೆ ನಗರಸಭಾ ಅಧಿಕಾರಿಗಳು ಸೋಮವಾರ ಕಾರ್ಯಾಚರಣೆ ನಡೆಸಿ ಪರಿಶೀಲಿಸಿದರು.

ರಸ್ತೆಬದಿ ವ್ಯಾಪಾರ ನಡೆಸುತ್ತಿರುವ ಕೆಲವು ವ್ಯಾಪಾರಿಗಳು ಕೊಳೆತ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವ ಕುರಿತು ವಂಚನೆಗೆ ಒಳಗಾದ ರಜೆಯಲ್ಲಿ ಊರಿಗೆ ಬಂದಿರುವ ಸೈನಿಕ ಕೆದಂಬಾಡಿ ನಿವಾಸಿ ಲಕ್ಷ್ಮೀಶ ಪಾಟಾಳಿ ಎಂಬವರು ನಗರಸಭೆಗೆ ದೂರು ನೀಡಿದ್ದರು. 

ದೂರಿನ ಹಿನ್ನಲೆಯಲ್ಲಿ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಹಾಗೂ ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ರಂಬೂಟಾನ್, ಮೂಸುಂಬಿ ಸೇರಿದಂತೆ ಕೆಲವು ಕೊಳೆತ ಹಣ್ಣುಗಳನ್ನು ಮಾರಾಟ ಮಾಡುತ್ತಿರುವುದು ಹಾಗೂ ಅಂಗಡಿಗಳ ಬಳಿ ಸ್ವಚ್ಛತೆ ಕಾಪಾಡಿಕೊಳ್ಳದೇ ಇರುವುದು ಗಮನಕ್ಕೆ ಬಂದು ಅಂಗಡಿಯವರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದರು. ಕೂಡಲೇ ಅಂಗಡಿಗಳನ್ನು ತೆರವುಗೊಳಿಸಬೇಕು. ಉದ್ಯಮ ಪರವಾನಿಗೆಯನ್ನು ಪಡೆದೇ ವ್ಯಾಪಾರ ನಡೆಸಬೇಕು ಎಂದು ಅಧಿಕಾರಿಗಳು ಸೂಚಿಸಿದರು. 

ಇದೇ ಸಂದರ್ಭದಲ್ಲಿ ಪಕ್ಕದ ಹೊಟೇಲ್ ಒಂದಕ್ಕೂ ದಾಳಿ ನಡೆಸಿದ ಅಧಿಕಾರಿಗಳು ಸ್ವಚ್ಛತೆಗೆ ನಿರ್ಲಕ್ಷ್ಯ ವಹಿಸಿರುವುದನ್ನು ಕಂಡು ಎಚ್ಚರಿಕೆ ನೀಡಿದರು. ಮಳೆಗಾಲದಲ್ಲಿ ಹೊಟೇಲ್‍ಗಳಲ್ಲಿ ಕಡ್ಡಾಯವಾಗಿ ಗ್ರಾಹಕರಿಗೆ ಬಿಸಿ ನೀರು ಕೊಡಬೇಕು. ಈ ಹಿಂದೆಯೂ ಹೊಟೇಲ್‍ನವರಿಗೆ ಎಚ್ಚರಿಕೆ ನೀಡಲಾಗಿದೆ. ಸರಿಪಡಿಸದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ನಿರೀಕ್ಷಕ ರಾಮಚಂದ್ರ ಎಚ್ಚರಿಕೆ ನೀಡಿದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News