​ಕೃಷಿಯಲ್ಲಿ ಲೆಕ್ಕ ತಪ್ಪಿದರೆ ನಷ್ಟ ತಪ್ಪದು: ಕೆ.ಶ್ರೀನಿವಾಸ ಭಟ್

Update: 2019-06-24 15:04 GMT

ಉಡುಪಿ, ಜೂ.24: ತೆಂಗು, ಅಡಿಕೆ, ಕಾಳುಮೆಣಸು ಕೃಷಿ ಯಾವುದೇ ಇರಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು, ಗೊಬ್ಬರ ಕೊಡುವುದು, ಕಡಿಮೆ ಅಂತರದಲ್ಲಿ ಹೆಚ್ಚು ಗಿಡ ನಾಟಿ ಮಾಡುವುದು, ತೀರಾ ಆಳವಾದ ಗುಂಡಿ ತೋಡಿ ಗಿಡನೆಡುವ ಕ್ರಮಗಳು, ಗಿಡ-ಮರದ ಆಹಾರಬೇರು ಇರುವಲ್ಲಿಗೇ ಗೊಬ್ಬರ ಹಾಕದಿರುವುದು ಇಳುವರಿ ಕುಂಠಿತಕ್ಕೆ ಕಾರಣವಾಗಿ ಕೃಷಿಕರು ಕೃಷಿಯಲ್ಲಿ ನಷ್ಟ ಅನುಭವಿಸುವಂತಾಗುತ್ತದೆ ಎಂದು ಸಾಧನಶೀಲ ಕೃಷಿಕ ಪ್ರಶಸ್ತಿ ವಿಜೇತ ಕುದಿ ಶ್ರೀನಿವಾಸ ಭಟ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕೃಷಿಕ ಸಂಘ ಮತ್ತು ಉಡುಪಿಯ ತೋಟಗಾರಿಕಾ ಇಲಾಖೆ ಕುದಿಯಲ್ಲಿರುವ ತಮ್ಮ ಕೃಷಿ ತೋಟದಲ್ಲಿ ಆಯೋಜಿಸಿದ್ದ ಅಡಿಕೆ, ತೆಂಗು, ಕಾಳುಮೆಣಸು ಕೃಷಿ ಮತ್ತು ನೀರಿಂಗಿಸುವ ಕುರಿತ ಪ್ರಾತ್ಯಕ್ಷತೆಯಲ್ಲಿ ಕೃಷಿಕರಿಗೆ ಪ್ರಾಯೋಗಿಕ ಮಾಹಿತಿ ನೀಡಿ ಅವರು ಮಾತನಾಡುತ್ತಿದ್ದರು.

ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತೋಟಗಾರಿಕಾ ಇಲಾಖೆಯ ಸಹಾಯಕ ಅಧಿಕಾರಿಗಳಾದ ದೀಪಾ ಎಸ್., ಶ್ವೇತಾ ಹಿರೇಮಠ್ ಇಲಾಖೆ ಮತ್ತು ಕೃಷಿಕರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.

ಜಿಲ್ಲಾ ಕೃಷಿಕ ಸಂಘದ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ, ದಿನೇಶ್ ಶೆಟ್ಟಿ ಹೆರ್ಗ, ಮಂಜುನಾಥ ಎಂರ್‌ಪ್ರೈಸ್ ಪರ್ಕಳದ ಮಂಜುನಾಥ ಉಪಾಧ್ಯ, ಉಡುಪಿ ಜಿಪಂ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್, ಗೀತಾ ವಾಗ್ಳೆ, ಸಂಧ್ಯಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸುಮಾರು ಮುನ್ನೂರಕ್ಕೂ ಅಧಿಕ ರೈತಬಾಂಧವರು ಮಾಹಿತಿ ಪಡೆದರು. ರವೀಂದ್ರ ಗುಜ್ಜರಬೆಟ್ಟು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News