​ಎಂಐಟಿಯ ರೋಬೋಟ್ ‘ಸೋಲೊ’ಗೆ ಅಮೆರಿಕದಲ್ಲಿ ಅಗ್ರಪ್ರಶಸ್ತಿ

Update: 2019-06-24 15:06 GMT

ಮಣಿಪಾಲ, ಜೂ.24: ಅಮೆರಿಕದ ಮಿಚಿಗನ್ ರೋಚೆಸ್ಟರ್‌ನ ಓಕ್ಲಾಂಡ್ ವಿವಿಯಲ್ಲಿ ಈ ತಿಂಗಳು ನಡೆದ ವಾರ್ಷಿಕ ‘ಇಂಟೆಲಿಜೆಂಟ್ ಗ್ರೌಂಡ್ ವೆಹಿಕಲ್’ ಸ್ಪರ್ಧೆಯಲ್ಲಿ ಮಣಿಪಾಲದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಪ್ರಾಜೆಕ್ಟ್ ಮಾನಸ್ ತಂಡ ನಿರ್ಮಿಸಿದ ರೋಬೋಟ್ ‘ಸೋಲೊ’ ಅಗ್ರಸ್ಥಾನವನ್ನು ಗೆದ್ದುಕೊಂಡಿದೆ.

ಭಾರತದ ಐಐಟಿ ಮದ್ರಾಸ್, ಐಐಟಿ ಖರಗ್‌ಪುರ್, ಡಿಟಿಯು ಸೇರಿದಂತೆ ವಿಶ್ವದಾದ್ಯಂತದಿಂದ ಬಂದಿರುವ 35 ತಂಡಗಳು ಸ್ಪರ್ಧಿಸಿದ ಈ ಸ್ಪರ್ಧಾಕೂಟ ದಲ್ಲಿ ‘ಸೋಲೊ’ ಅತ್ಯುತ್ತಮ ರೋಬೊ ಆಗಿ ಮೂಡಿಬಂತು. ಇದಕ್ಕಾಗಿ ಪ್ರಾಜೆಕ್ಟ್ ಮಾನಸ ತಂಡ 3,800 ಡಾಲರ್ ನಗದು ಬಹುಮಾನವನ್ನೂ ಪಡೆಯಿತು.

‘ಪ್ರತಿಷ್ಠಿತ ಈ ಸ್ಪರ್ಧೆಯಲ್ಲಿ ಕೇವಲ ಎರಡನೇ ಬಾರಿಗೆ ಸ್ಪರ್ಧಿಸಿದ ಈ ತಂಡದ ಸಾಧನೆ ಗಮನಾರ್ಹವೆನಿಸಿದೆ.’ ಎಂದು ಎಂಐಟಿಯ ನಿರ್ದೇಶಕ ಡಾ.ಶ್ರೀಕಾಂತ್ ರಾವ್ ನುಡಿದರು. ವಿದ್ಯಾರ್ಥಿಗಳು ವಿಶ್ವಮಟ್ಟದಲ್ಲಿ ತಾವು ಮಿಂಚಿದ್ದಲ್ಲದೇ ದೇಶ ಹಾಗೂ ಎಂಐಟಿಗೆ ಹೆಮ್ಮೆ ಮೂಡುವಂತೆ ಮಾಡಿದ್ದಾರೆ. ಈ ಅನುಭವದಿಂದ ಅವರು ಭವಿಷ್ಯದಲ್ಲೂ ಇದೇ ಪ್ರದರ್ಶನವನ್ನು ನೀಡುವ ವಿಶ್ವಾಸ ನನಗಿದೆ ಎಂದರು.

ಸಿದ್ಧಾರ್ಥ ವೆಂಕಟರಮಣ ಹಾಗೂ ಶೃಜಿತ್ ಸಿಂಗ್ ನೇತೃತ್ವದ ಪ್ರಾಜೆಕ್ಟ್ ಮಾನಸ ತಂಡದಲ್ಲಿ ಆರ್ಯ ಕರಾನಿ, ಅನ್ಸೆಲ್ ಡಯಾಸ್, ರಕ್ಷಿತ್ ಜೈನ್, ಶಿವೇಶ್ ಖೇತಾನ್, ಧೀರಜ್ ಮೋಹನ್, ಶರತ್‌ಕೃಷ್ಣನ್, ರಮೇಶ್, ಅನಿರುದ್ಧ ಕಶ್ಯಪ್, ನಿಶಾನ್ ಡಿಅಲ್ಮೇಡ, ಗೋಕುಲಂ ಪಿ. ಹಾಗೂ ತಾನಿಯಾ ಮುಂಡ್ಕೆ ಇದ್ದರು. ಎಂಐಟಿಯ ಕಂಪ್ಯೂಟರ್ ಸಾಯನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಆಶಾಲತಾ ನಾಯಕ್ ತಂಡದ ಸಲಹೆಗಾರರಾಗಿದ್ದರು.

ಕಳೆದ ಬಾರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪ್ರಾಜೆಕ್ಟ್ ಮಾನಸ್ ತಂಡ ಒಟ್ಟಾರೆಯಾಗಿ ಒಂಭತ್ತನೇ ಸ್ಥಾನವನ್ನು ಪಡೆದಿತ್ತು. ಆದರೆ ಈ ಬಾರಿ ಅದು ಸಮಗ್ರ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News