ಮರಗಳನ್ನು ಕಡಿಯುವಾಗ ಸಾವಿರ ಬಾರಿ ಯೋಚಿಸಿ: ಶ್ರೀಈಶಪ್ರಿಯತೀರ್ಥ ಸ್ವಾಮೀಜಿ

Update: 2019-06-24 15:08 GMT

ಉಡುಪಿ, ಜೂ.24: ನಮ್ಮ ಹಳ್ಳಿಗಳಲ್ಲಿ ಮತ್ತು ನಗರದ ಸುತ್ತಮುತ್ತ ನಮ್ಮ ಹಿರಿಯರು ನೆಟ್ಟು ಪೋಷಿಸಿದ ಅಥವಾ ತಾನಾಗಿಯೇ ಬೆಳೆದ ಮಾವು, ಹಲಸು, ಹೆಬ್ಬಲಸುನಂಥ ಉಪಯುಕ್ತ ಮರಗಳನ್ನು ನಾವಿಂದು ಬೇಕಾ ಬಿಟ್ಟಿಯಾಗಿ ಕಡಿದು ಉರುಳಿಸುತ್ತಿದ್ದೇವೆ. ಪಕ್ಷಿ, ಪ್ರಾಣಿಗಳೂ ಸೇರಿ ಹತ್ತಾರು ಬಗೆಯ ಜೀವರಾಶಿಗಳಿಗೆ ಆಶ್ರಯ,ಪೋಷಣೆ ನೀಡುತ್ತಿದ್ದ ಈ ಮರಗಳನ್ನು ನಾಶಮಾಡುವುದರಿಂದ ಆ ಜೀವಿಗಳ ಅಸ್ತಿತ್ವದ ಮೇಲೂ ಕೆಟ್ಟ ಪರಿಣಾಮಗಳಿಗೆ ಕಾರಣರಾಗುತ್ತಿದ್ದೇವೆ ಎಂದು ಅದಮಾರು ಮಠದ ಕಿರಿಯ ಯತಿಗಳಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಹೇಳಿದ್ದಾರೆ.

ಪೆರಂಪಳ್ಳಿ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ರವಿವಾರ ನಡೆದ ಸಸಿ ವಿತರಣೆ ಹಾಗೂ ಸ್ವಚ್ಛಭಾರತ ಮಿಶನ್ ವತಿಯಿಂದ ನಡೆದ ಜಲಜಾಗೃತಿ ಹಾಗೂ ಸ್ವಚ್ಛತಾ ಅಭಿಯಾನದಲ್ಲಿ ಭಾವಹಿಸಿ ಅವರು ಮಾತನಾಡುತಿದ್ದರು.

ಇದೀಗ ನಮ್ಮ ನಡುವೆ ಉಳಿದಿರುವ ಇಂತಹ ಹೆಮ್ಮರಗಳನ್ನು ರಕ್ಷಿಸಲೇ ಬೇಕಾಗಿದೆ. ಆ ಜಾಗಕ್ಕೆ ಸಂಬಂಧಪಟ್ಟವರು ಮಾತ್ರವಲ್ಲ ಆ ಭಾಗದ ಜನರೆಲ್ಲ ಸೇರಿ ಈ ಮರಗಳನ್ನು ಕಡಿಯಲು ಹೊರಟಾಗ ಸಾವಿರ ಬಾರಿ ಯೋಚಿಸಬೇಕು. ಏನಾದರೂ ಮಾಡಿ ಅವುಗಳನ್ನು ಉಳಿಸಲು ಪ್ರಯತ್ನಿಸಬೇಕು ಎಂದು ಸ್ವಾಮಿ ೀಜಿ ಕಳಕಳಿಯ ಮನವಿ ಮಾಡಿದರು.

ಜಿಲ್ಲಾಡಳಿತದ ಸ್ವಚ್ಛತಾ ಹಾಗೂ ಜಲಜಾಗೃತಿ ಅಭಿಯಾನದ ಸಂಪನ್ಮೂಲ ವ್ಯಕ್ತಿ ರಿಚರ್ಡ್ ರೆಬೆಲ್ಲೋ, ನೋಡಲ್ ಅಧಿಕಾರಿ ಹರಿಕೃಷ್ಣ ಶಿವತ್ತಾಯ ಹಾಗೂ ಸಹಾಯಕ ರಾಜೇಶ್ ನೇತೃತ್ವದ ತಂಡದಿಂದ ‘ಜಲವರ್ಷ’ದ ಅಂಗವಾಗಿ ಸಂದೇಶವುಳ್ಳ ಸಾಕ್ಷ್ಯಚಿತ್ರವೂ ನಡೆಯಿತು. ಮಕ್ಕಳಲ್ಲಿ ಪರಿಸರ ರಕ್ಷಣೆಯ ಜಾಗೃತಿ ಗಾಗಿ ವಿಶೇಷವಾಗಿ ತಯಾರಿಸಲಾದ ಸಸಿಗಳ ಬೀಜಗಳನ್ನು ತುಂಬಿದ ಪೆನ್ಸಿಲ್ ಗಳನ್ನು ಶ್ರೀಗಳು ಮಕ್ಕಳಿಗೆ ವಿತರಿಸಿದರು.

ಗ್ರಾಮದಲ್ಲಿ ಪುಟ್ಟ ಜಾಗದಲ್ಲಿ ಮೂವತ್ತಕ್ಕೂ ಅಧಿಕ ನಾಟಿ ಹಸುಗಳನ್ನು ಸಾಕುತ್ತಿರುವ ಪರಿಶಿಷ್ಟ ಮಹಿಳೆ ಕಮಲಕ್ಕ ಹಾಗೂ ಶ್ರದ್ಧೆಯಿಂದ ಕೃಷಿ ಕಾರ್ಯ ನಡೆಸುವ ಹತ್ತು ಮಂದಿ ಕೃಷಿಕರನ್ನು ಅದಮಾರುಶ್ರೀ ಸಂಮಾನಿಸಿದರು.

ದೇವಳದ ಆಡಳಿತ ಮೊಕ್ತೇಸರ ಪಿ.ಎನ್. ಪ್ರಸನ್ನಕುಮಾರ್ ರಾವ್, ಅರ್ಚಕ ಪ್ರದ್ಯುಮ್ನ ಭಟ್, ರಾಘವೇಂದ್ರ ಭಟ್, ಶಂಕರ್, ಮಾಜಿ ನಗರಸಭಾ ಸದಸ್ಯ ಪ್ರಶಾಂತ್ ಭಟ್, ಶ್ರೀಶ ಭಟ್, ಹರ್ಷ, ಶಕುಂತಳಾ, ರಾಜಶ್ರೀ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News