ಕುಸಿಯುತ್ತಿರುವ ಆರ್ಥಿಕತೆ ತಡೆಯಲು ಇರಾನ್ ಜೊತೆ ಒಪ್ಪಂದಕ್ಕೂ ಸಿದ್ಧ: ಡೊನಾಲ್ಡ್ ಟ್ರಂಪ್

Update: 2019-06-24 16:11 GMT

ವಾಶಿಂಗ್ಟನ್, ಜೂ. 24: ಇರಾನ್ ವಿರುದ್ಧ ಹೊಸ ಆರ್ಥಿಕ ದಿಗ್ಬಂಧನಗಳನ್ನು ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದಾಗ್ಯೂ, ಇರಾನ್‌ನ ಕುಸಿಯುತ್ತಿರುವ ಆರ್ಥಿಕತೆಗೆ ಪುನಶ್ಚೇತನ ನೀಡುವುದಕ್ಕಾಗಿ ಆ ದೇಶದೊಂದಿಗೆ ಒಪ್ಪಂದವೊಂದನ್ನು ನಡೆಸಲು ತಾನು ಬಯಸುವುದಾಗಿಯೂ ಅವರು ಹೇಳಿದ್ದಾರೆ.

ಅಮೆರಿಕದ ಮಾನವರಹಿತ ಬೇಹುಗಾರಿಕಾ ಡ್ರೋನ್ ಒಂದನ್ನು ಇರಾನ್ ಇತ್ತೀಚೆಗೆ ಹೊಡೆದುರುಳಿಸಿದ ಬಳಿಕ ತಾರಕಕ್ಕೇರಿರುವ ಉದ್ವಿಗ್ನತೆಯನ್ನು ಶಮನಗೊಳಿಸಲು ಅಮೆರಿಕ ಮುಂದಾಗಿರುವುದನ್ನು ಟ್ರಂಪ್‌ರ ಈ ಹೇಳಿಕೆ ಸೂಚಿಸುತ್ತದೆ ಎಂಬುದಾಗಿ ವ್ಯಾಖ್ಯಾನಿಸಲಾಗಿದೆ.

ಅಮೆರಿಕದ ಗ್ಲೋಬಲ್ ಹಾಕ್ ಬೇಹುಗಾರಿಕಾ ಡ್ರೋನನ್ನು ಇರಾನ್‌ನ ಕ್ಷಿಪಣಿಯೊಂದು ಗುರುವಾರ ಹೊಡೆದುರುಳಿಸಿತ್ತು. ತನ್ನ ಡ್ರೋನ್ ಅಂತರ್‌ರಾಷ್ಟ್ರೀಯ ವಾಯುಪ್ರದೇಶದಲ್ಲಿರುವಾಗ ಹೊಡೆದುರುಳಿಸಲಾಗಿದೆ ಎಂಬುದಾಗಿ ಬಳಿಕ ಅಮೆರಿಕ ಹೇಳಿಕೊಂಡಿತ್ತು.

ಇರಾನ್ ವಿರುದ್ಧ ತಾನು ಸೇನಾ ಕಾರ್ಯಾಚರಣೆಗೆ ಆದೇಶ ನೀಡಿದ್ದೆನಾದರೂ, ದಾಳಿಯಲ್ಲಿ 150ಕ್ಕೂ ಹೆಚ್ಚು ಮಂದಿ ಸಾಯುವ ಸಾಧ್ಯತೆಯಿದ್ದ ಹಿನ್ನೆಲೆಯಲ್ಲಿ ಆದೇಶವನ್ನು ಹಿಂದಕ್ಕೆ ಪಡೆದೆ ಎಂಬುದಾಗಿಯೂ ಬಳಿಕ ಟ್ರಂಪ್ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಇರಾನ್, ತನ್ನ ವಾಯುಪ್ರದೇಶದಲ್ಲಿದ್ದಾಗ ಅಮೆರಿಕದ ಡ್ರೋನನ್ನು ಉರುಳಿಸಲಾಗಿದೆ ಎಂದು ಹೇಳಿದೆ ಹಾಗೂ ಅಮೆರಿಕದ ಯಾವುದೇ ಆಕ್ರಮಣದ ವಿರುದ್ಧ ಪ್ರತ್ಯಾಕ್ರಮಣ ನಡೆಸುವುದಾಗಿ ಪಣತೊಟ್ಟಿದೆ.

ಇರಾನ್ ವಿರುದ್ಧ ಹೊಸದಾಗಿ ದಿಗ್ಬಂಧನಗಳನ್ನು ವಿಧಿಸುವ ಮೂಲಕ ಆ ದೇಶದ ಮೇಲೆ ಒತ್ತಡವನ್ನು ಹೇರಲು ರಾಜತಾಂತ್ರಿಕ ಮಾರ್ಗವನ್ನು ಬಳಸಿಕೊಳ್ಳುವುದಾಗಿ ಟ್ರಂಪ್ ವಾಶಿಂಗ್ಟನ್‌ನಲ್ಲಿ ಹೇಳಿದರು.

ಸೇನಾ ಕಾರ್ಯಾಚರಣೆಯ ಆಯ್ಕೆ ಯಾವತ್ತೂ ಮುಕ್ತವಾಗಿದೆ ಎಂದು ಅಮೆರಿಕ ಅಧ್ಯಕ್ಷರು ಹೇಳಿದರು. ಆದರೆ, ಇರಾನ್‌ನ ಆರ್ಥಿಕತೆಯನ್ನು ಸದೃಢಗೊಳಿಸುವ ಒಪ್ಪಂದವೊಂದನ್ನು ಆ ದೇಶದೊಂದಿಗೆ ಮಾಡಿಕೊಳ್ಳಲು ನಾನು ಯಾವಾಗಲೂ ಸಿದ್ಧನಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News