ಲವಾಸ ಅವರ ಅಸಮ್ಮತಿ ಟಿಪ್ಪಣಿ ಬಹಿರಂಗಗೊಳಿಸಿದರೆ ವ್ಯಕ್ತಿಯ ಜೀವಕ್ಕೆ ಅಪಾಯ: ಚು. ಆಯೋಗ

Update: 2019-06-24 16:55 GMT

 ಹೊಸದಿಲ್ಲಿ, ಜೂ.24: ಸಾರ್ವತ್ರಿಕ ಚುನಾವಣೆಯ ಸಂದರ್ಭ ಪ್ರಧಾನಿ ಮೋದಿ ಮಾದರಿ ನೀತಿ ಸಂಹಿತೆ ಉಲ್ಲಂಘಿದ್ದಾರೆ ಎಂಬ ಆರೋಪದಲ್ಲಿ ಮೋದಿಗೆ ಕ್ಲೀನ್ ಚಿಟ್ ನೀಡುವುದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದ ಚುನಾವಣಾ ಆಯುಕ್ತ ಅಶೋಕ್ ಲವಾಸ ಅವರ ಅಸಮ್ಮತಿ ಟಿಪ್ಪಣಿಯನ್ನು ಬಹಿರಂಗಪಡಿಸಲು ಚುನಾವಣಾ ಆಯೋಗ ನಿರಾಕರಿಸಿದೆ.

ಮಾಹಿತಿ ಬಹಿರಂಗಗೊಳಿಸಿದರೆ ಅದರಿಂದ ವ್ಯಕ್ತಿಯ ಜೀವಕ್ಕೆ ಅಪಾಯ ಎದುರಾಗಬಹುದು ಅಥವಾ ದೈಹಿಕ ತೊಂದರೆಯಾಗಬಹುದು ಎಂದು ಚುನಾವಣಾ ಆಯೋಗವು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿದೆ.

 ಲೋಕಸಭಾ ಚುನಾವಣೆಯ ಸಂದರ್ಭ ಮೋದಿ ವಾರ್ಧಾದಲ್ಲಿ ಎಪ್ರಿಲ್ 1ರಂದು, ಲಾತೂರ್‌ನಲ್ಲಿ ಎಪ್ರಿಲ್ 9ರಂದು, ಪಟಾನ್ ಮತ್ತು ಬಾರ್ಮರ್‌ನಲ್ಲಿ ಎಪ್ರಿಲ್ 21ರಂದು, ವಾರಾಣಸಿಯಲ್ಲಿ ಎಪ್ರಿಲ್ 25ರಂದು ಮಾಡಿದ್ದ ಪ್ರಚಾರ ಭಾಷಣದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ್ದರು ಎಂದು ಆರೋಪಿಸಲಾಗಿತ್ತು.

ಇದರ ವಿಚಾರಣೆ ನಡೆಸಿದ್ದ ಚುನಾವಣಾ ಆಯೋಗ ಆರೋಪದಲ್ಲಿ ಹುರುಳಿಲ್ಲ ಎಂದು ತಿಳಿಸಿ ಮೋದಿಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ ಮೂವರು ಸದಸ್ಯರಿರುವ ಚುನಾವಣಾ ಆಯೋಗದಲ್ಲಿ ಚುನಾವಣಾ ಆಯುಕ್ತ ಅಶೋಕ್ ಲವಾಸ ಕ್ಲೀನ್ ಚಿಟ್ ನೀಡಲು ಅಸಮ್ಮತಿ ವ್ಯಕ್ತಪಡಿಸಿದ್ದರು. ಆಯೋಗದ ಸಭೆಯಲ್ಲಿ ಅಲ್ಪಸಂಖ್ಯಾತ ಅಭಿಪ್ರಾಯವನ್ನೂ ದಾಖಲಿಸಬೇಕೆಂಬ ಅವರ ಕೋರಿಕೆಯನ್ನು ಆಯೋಗ ತಳ್ಳಿಹಾಕಿತ್ತು.

ಲವಾಸ ಅಸಮ್ಮತಿ ಸೂಚಿಸಿದ್ದ ಟಿಪ್ಪಣಿಯನ್ನು ಬಹಿರಂಗಗೊಳಿಸಬೇಕು ಎಂದು ಪುಣೆ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ವಿಹಾರ್ ದುರ್ವೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಆಯೋಗ ತಿರಸ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News