ಸಾಕಲು ಕೊಂಡೊಯ್ಯುತ್ತಿದ್ದ ದನಗಳನ್ನು ದರೋಡೆಗೈದ ಬಜರಂಗ ದಳ: ಆರೋಪ

Update: 2019-06-24 17:48 GMT
ಹಲ್ಲೆಗೊಳಗಾದವರು

ಪೆರ್ಲ ಮಂಜನಡ್ಕದಲ್ಲಿ ಘಟನೆ

ಕಾಸರಗೋಡು, ಜೂ.24: ಸಾಕಲೆಂದು ದನಗಳನ್ನು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವೊಂದನ್ನು ಬಜರಂಗ ದಳದ ಕಾರ್ಯಕರ್ತರೆನ್ನಲಾದ ತಂಡವೊಂದು ತಡೆದು ಚಾಲಕ ಮತ್ತು ಸಿಬ್ಬಂದಿ ಮೇಲೆ ಹಲ್ಲೆಗೈದು ನಗದು ದೋಚಿ, ದನಗಳಿದ್ದ ಪಿಕಪ್ ಜೊತೆ ಪರಾರಿಯಾದ ಘಟನೆ ಸೋಮವಾರ ಮುಂಜಾನೆ ಪೆರ್ಲ ಮಂಜನಡ್ಕ ಎಂಬಲ್ಲಿ ನಡೆದಿದೆ.

ಪುತ್ತೂರು ಪರ್ಪಾಜೆಯ ಹಂಝ(30) ಮತ್ತು ಅಲ್ತಾಫ್ (30) ಎಂಬವರು ಹಲ್ಲೆಗೊಳಗಾದವರು. ಇವರು ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಜರಂಗ ದಳದ ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ ಎಂದು ಗಾಯಾಳುಗಳು ದೂರಿದ್ದಾರೆ.

ಘಟನೆ ವಿವರ: ಎಣ್ಮಕಜೆ ಮಂಜನಡ್ಕದಲ್ಲಿ ಜಾನುವಾರು ಸಾಕಣೆ ಕೇಂದ್ರ ನಡೆಸುತ್ತಿರುವ ಹಾರಿಸ್ ಎಂಬವರಿಗೆ ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಕೆದಿಲ ಎಂಬಲ್ಲಿಂದ ದನಗಳನ್ನು ಸಾಗಿಸುತ್ತಿದ್ದಾಗ ಈ ಕೃತ್ಯ ನಡೆದಿದೆ. ಇಂದು ಬೆಳಗ್ಗೆ 6:30ರ ಸುಮಾರಿಗೆ ಕೆದಿಲದ ಇಸ್ಮಾಯೀಲ್ ಎಂಬವರಿಂದ ಎರಡು ದನ ಹಾಗೂ ಒಂದು ಕರುವನ್ನು ಪಿಕಪ್ ವಾಹನದಲ್ಲಿ ಹಂಝ ಮತ್ತು ಅಲ್ತಾಫ್ ಕೊಂಡೊಯ್ಯುತ್ತಿದ್ದರೆನ್ನಲಾಗಿದೆ. ಇವರು ಹಾರಿಸ್ ಮನೆ ಸಮೀಪ ತಲುಪಿದಾಗ ಕಾರಿನಲ್ಲಿ ಬಂದ ಏಳು ಮಂದಿಯ ತಂಡ ಪಿಕಪ್ ವಾಹನವನ್ನು ತಡೆದು ಹಂಝ ಮತ್ತು ಅಲ್ತಾಫ್‌ರಿಗೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಬಳಿಕ ಬಲವಂತವಾಗಿ ಪಿಕಪ್ ವಾಹನದ ಕೀಲಿಕೈ ಕಸಿದು, ಅದರಲ್ಲಿದ್ದ 50 ಸಾವಿರ ರೂ. ನಗದು ಹಾಗೂ 3 ದನಗಳಿದ್ದ ಪಿಕಪ್ ಸಹಿತ ಪರಾರಿಯಾಗಿದ್ದಾರೆ ಎಂದು ಹಾರಿಸ್ ಬದಿಯಡ್ಕ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಬದಿಯಡ್ಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ದುಷ್ಕರ್ಮಿಗಳು ಪಿಕಪ್‌ನ್ನು ದಾರಿಮಧ್ಯೆ ತೊರೆದು ಅದರಲ್ಲಿದ್ದ ದನಗಳನ್ನು ಹಾಗೂ ನಗದಿನೊಂದಿಗೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News