ಗ್ರಾಮಸ್ಥರಿಗೆ ಭೀತಿ ಮೂಡಿಸಿದ ಆರೋಪ: ಕರ್ನಲ್, 30 ಸೈನಿಕರ ವಿರುದ್ಧ ಪ್ರಕರಣ

Update: 2019-06-25 03:52 GMT

ಪುಣೆ, ಜೂ.25: ಗ್ರಾಮದ ಹೊಲವೊಂದಕ್ಕೆ ಅಕ್ರಮವಾಗಿ ಪ್ರವೇಶಿಸಿ, ಬೆಳೆಗಳನ್ನು ನಾಶಪಡಿಸಿ ಜನರಲ್ಲಿ ಭೀತಿ ಹುಟ್ಟಿಸಿದ ಆರೋಪದಲ್ಲಿ ಸೇನೆಯ ಕರ್ನಲ್ ಹಾಗೂ 30-40 ಸೈನಿಕರ ವಿರುದ್ಧ ಗ್ರಾಮೀಣ ಪುಣೆಯ ಖೇಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಾಸಿಕ್ ಹೆದ್ದಾರಿ ಪಕ್ಕದ ಗುಲಾನಿ ಗ್ರಾಮದಲ್ಲಿ ಜೂನ್ 22ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕರ್ನಲ್ ಅವರು ಹೈದರಾಬಾದ್ ಫಿರಂಗಿದಳ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಈ ಕೃಷಿಭೂಮಿಯು 65 ಎಕರೆ ಆಸ್ತಿಯ ಭಾಗವಾಗಿದ್ದು, ಕರ್ನಲ್ ಕುಟುಂಬ ಮತ್ತು ಇತರ ಎರಡು ಕುಟುಂಬಗಳ ನಡುವಿನ ಭೂ ವ್ಯಾಜ್ಯಕ್ಕೆ ಸಂಬಂಧಿಸಿದ ಘಟನೆ ಇದಾಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಈ ಎರಡು ಕುಟುಂಬಗಳ ಸದಸ್ಯರ ಹೆಸರು ಭೂ ದಾಖಲೆಗಳಲ್ಲಿ ಮಾಲಕರು ಎಂದು ದಾಖಲಾಗಿದ್ದು, ಆ ಜಾಗದಲ್ಲೇ ಘಟನೆ ನಡೆದಿದೆ. ಈ ಆಸ್ತಿಗೆ ಸಂಬಂಧಿಸಿದ ಸಿವಿಲ್ ವ್ಯಾಜ್ಯ ಖೇಡ್ ಸೆಷನ್ ನ್ಯಾಯಾಲಯದಲ್ಲಿ 2013ರಿಂದೀಚೆಗೆ ಬಾಕಿ ಇದೆ. ಉಪವಿಭಾಗಾಧಿಕಾರಿಗಳ ಬಳಿಯೂ ಈ ಸಂಬಂಧದ ಮೇಲ್ಮನವಿಯೊಂದು ವಿಚಾರಣೆಗೆ ಬಾಕಿ ಇದೆ.

ಜೂನ್ 14ರಂದು ಕರ್ನಲ್ ತಂದೆ ಹಾಗೂ ಸಹೋದರರು ಮತ್ತು ಎರಡು ಕುಟುಂಬಗಳ ಸದಸ್ಯರು, ಬೆಂಬಲಿಗರ ನಡುವೆ ಘರ್ಷಣೆ ಏರ್ಪಟ್ಟಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದ್ದರು.

"ಶನಿವಾರ, ಕರ್ನಲ್ 30-40 ಮಂದಿ ಸಶಸ್ತ್ರ ಸೈನಿಕರನ್ನು ನಾಲ್ಕು ವಾಹನಗಳಲ್ಲಿ ಹೈದರಾಬಾದ್‌ನಿಂದ ಗ್ರಾಮಕ್ಕೆ ಕರೆತಂದು ಅವರ ಕಾವಲಿನಲ್ಲಿ ವ್ಯಾಜ್ಯದ ಜಮೀನನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ, ಸೋಯಾಬೀನ್ ಬೆಳೆ ಬಿತ್ತಿದರು" ಎಂದು ಪೊಲೀಸರು ಹೇಳಿದ್ದಾರೆ. ವಿರೋಧಿ ಕುಟುಂಬದ ಮಹಿಳೆಯೊಬ್ಬರು ಈ ಸಂಬಂಧ ದೂರು ನೀಡಿದ್ದಾರೆ. ಕರ್ನಲ್ ಈ ಕುಟುಂಬಕ್ಕೆ ಬೆದರಿಕೆ ಹಾಕಿದ್ದಲ್ಲದೇ, ಜಮೀನಿಗೆ ಪ್ರವೇಶಿಸದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News