ತುಳು ಸಾಹಿತ್ಯ ಕ್ಷೇತ್ರಕ್ಕೆ ಡಿ.ಕೆ.ಚೌಟರ ಕೊಡುಗೆ ಅಪಾರ: ವಿವೇಕ ರೈ

Update: 2019-06-25 13:25 GMT

ಮಂಗಳೂರು, ಜೂ.25: ತುಳುವಿನಲ್ಲಿ ಬಂದ ಡಿ.ಕೆ.ಚೌಟರ ಕೃತಿಗಳು ಕನ್ನಡದಲ್ಲೂ ಪ್ರಕಟಗೊಂಡ ಬಳಿಕ ತುಳು ಭಾಷೆಯ ಗೌರವ ಹೆಚ್ಚಾಗಿವೆ. ಅವರ ಕೃತಿಗಳು ತುಳು ಸಾಹಿತ್ಯ ಕ್ಷೇತ್ರಕ್ಕೆ ಹೊಸ ಚೈತನ್ಯವನ್ನೇ ನೀಡಿದೆ. ಅಲ್ಲದೆ ಅವರು ತುಳು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಎಂದು ವಿಶ್ರಾಂತ ಕುಲಪತಿ ಪ್ರೊ.ವಿವೇಕ್ ರೈ ಹೇಳಿದರು.

ತುಳು ಸಾಹಿತ್ಯ ಅಕಾಡಮಿಯ ವತಿಯಿಂದ ನಗರದ ತುಳು ಭವನದ ಸಿರಿ ಚಾವಡಿಯಲ್ಲಿ ಸಾಹಿತಿ, ರಂಗಕರ್ಮಿ ಡಿ.ಕೆ.ಚೌಟರಿಗೆ ಮಂಗಳವಾರ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಡಿ.ಕೆ. ಚೌಟರು 15 ವರ್ಷಗಳ ಕಾಲ ತುಳು ಸಾಹಿತ್ಯ ಕ್ಷೇತ್ರದಲ್ಲಿ ದುಡಿದು ಸಾಕಷ್ಟು ಉತ್ತಮವಾದ ಕೃತಿಗಳನ್ನು ಹೊರತಂದಿದ್ದಾರೆ. ಅವರು ತುಳುವಿನಲ್ಲಿ ಬರೆಯುವ ಮುನ್ನ ತುಳುವಿನಲ್ಲಿ ಇತರರು ಸಾಕಷ್ಟು ಉತ್ತಮ ಕೃತಿಗಳನ್ನು ರಚಿಸಿದ್ದಾರೆ. ಆದರೆ ಡಿ.ಕೆ.ಚೌಟರ ಕೃತಿಗಳು ಬರೀ ತುಳು ಭಾಷೆಗೆ ಸೀಮಿತಗೊಳ್ಳದೆ ಕನ್ನಡ, ಇಂಗ್ಲಿಷ್‌ಗೆ ಅನುವಾದಗೊಂಡ ಬಳಿಕ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತು ಇತರ ಭಾಷಾಭಿಮಾನಿಗಳ ಕುತೂಹಲ ಮತ್ತಷ್ಟೂ ಜಾಸ್ತಿಯಾಯಿತು ಎಂದರು.

ಡಿ.ಕೆ. ಚೌಟರು ಮಂಜೇಶ್ವರ ಗೋವಿಂದ ಪೈ ಅವರ ಸಾಹಿತ್ಯದಿಂದ ಹೆಚ್ಚಿನ ಪ್ರಭಾವ ಬೆಳೆಸಿಕೊಂಡ ಪರಿಣಾಮ ಸಚಿವ ಮೊಯ್ಲಿ ಅವರ ಜತೆಗೂಡಿಕೊಂಡು ಗೋವಿಂದ ಪೈ ಅವರ ಗಿಳಿವಿಂಡು ಯೋಜನೆಯಲ್ಲಿ ಸಾಕಷ್ಟು ದುಡಿದು ಅದಕ್ಕೊಂದು ಹೊಸ ಆಯಾಮವನ್ನು ತಂದುಕೊಟ್ಟರು. ಅವರು ಬರೀ ಒಂದು ಕ್ಷೇತ್ರಕ್ಕೆ ಮೀಸಲಾಗಿರದೆ ಕೃಷಿ, ಸಾಹಿತ್ಯ, ರಂಗಭೂಮಿ ಎಲ್ಲ ಕಡೆಯಲ್ಲೂ ಪ್ರತಿಭೆಯನ್ನು ತೋರಿಸಿದರು ಎಂದು ವಿವೇಕ ರೈ ನುಡಿದರು.

ವಿಶ್ರಾಂಶ ಕುಲಪತಿ ಡಾ. ಚೆನ್ನಪ್ಪ ಗೌಡ, ಹಿರಿಯ ಸಾಹಿತಿಗಳಾದ ವಾಮನ ನಂದಾವರ, ನಾ.ಮೊಗಸಾಲೆ, ರಂಗಭೂಮಿ ನಿರ್ದೇಶಕ ವಿಜಯ ಕುಮಾರ್ ಶೆಟ್ಟಿ ತೋನ್ಸೆ ನುಡಿನಮನ ಸಲ್ಲಿಸಿದರು.

ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ, ರಿಜಿಸ್ಟ್ರಾರ್ ಚಂದ್ರಹಾಸ ರೈ ಉಪಸ್ಥಿತರಿದ್ದರು. ಅಕಾಡಮಿಯ ಸದಸ್ಯ ತಾರಾನಾಥ್ ಕಾಪಿಕಾಡ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News