ಜು.2-7: ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಮೆಂಟ್

Update: 2019-06-25 13:27 GMT

ಉಡುಪಿ, ಜೂ.25: ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ವತಿಯಿಂದ 13ವರ್ಷ ವಯೋಮಿತಿಯೊಳಗಿನ ಬಾಲಕ ಮತ್ತು ಬಾಲಕಿಯರ ಅಖಿಲ ಭಾರತ ಸಬ್ ಜ್ಯೂನಿಯರ್ ರ್ಯಾಂಕಿಂಗ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯನ್ನು ಜು.2ರಿಂದ ಜು.7ರವರೆಗೆ ಏರ್ಪಡಿಸಲಾಗಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಉಡುಪಿ ಶಾಸಕ ಹಾಗೂ ಅಸೋಸಿಯೇಶನ್ ಅಧ್ಯಕ್ಷ ಕೆ.ರಘುಪತಿ ಭಟ್ ಈ ವಿಷಯ ತಿಳಿಸಿದರು. ಬ್ಯಾಂಕ್ ಆಫ್ ಬರೋಡ ಸಹ ಪ್ರಾಯೋಜಕತ್ವ ನೀಡಿರುವ ಈ ಪಂದ್ಯಾಟವು ಉಡುಪಿ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣ ಮತ್ತು ಮಣಿಪಾಲದ ಮರಿನಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇದರಲ್ಲಿ ಭಾರತ ದೇಶವನ್ನು ಪ್ರತಿನಿಧಿಸುವ ಆಟಗಾರರಲ್ಲದೆ ದೇಶದ ಎಲ್ಲ ರಾಜ್ಯಗಳ ಅಗ್ರ ಶ್ರೇಯಾಂಕಿತ ಸುಮಾರು ಒಂದು ಸಾವಿರ ಆಟಗಾರರು ಮತ್ತು 50 ಮಂದಿ ತೀರ್ಪುಗಾರರು ಭಾಗವಹಿಸಲಿರುವರು. ಎಲ್ಲ ಆಟಗಾರರಿಗೆ ಉಚಿತ ಊಟ ಉಪಚಾರದ ವ್ಯವಸ್ಥೆ ಮಾಡಲಾಗಿದೆ. ಈ ಕೂಟದ ಪ್ರಶಸ್ತಿ ಮೊತ್ತ 3.5ಲಕ್ಷ ರೂ. ಸೇರಿದಂತೆ ಕೂಟದ ಒಟ್ಟು ವೆಚ್ಚ 43.63ಲಕ್ಷ ರೂ. ಆಗಲಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಎಂ.ಕಾಶೀರಾಮ್ ಪೈ, ಸಂಚಾಲಕ ಸೊಹೈಲ್ ಅಮೀನ್, ಜೊತೆ ಕಾರ್ಯದರ್ಶಿ ಅರುಣ್ ಎನ್. ಶೇರಿಗಾರ್, ಸಂದೀಪ್ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News