×
Ad

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ನೂತನ ಕಚೇರಿ ಉದ್ಘಾಟನೆ

Update: 2019-06-25 19:28 IST

ಬೆಳ್ತಂಗಡಿ: 1982ರಲ್ಲಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಆರಂಭಗೊಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂದು ರಾಜ್ಯದೆಲ್ಲೆಡೆ ಜನಪರ ಚಳವಳಿಯಾಗಿ ಪ್ರತಿ ಮನೆಗೂ  ತಲುಪಿದೆ. ಜನರ ಎಲ್ಲಾ ಬೇಡಿಕೆಗಳನ್ನು ಪೂರೈಸಿ ಜೀವನ ಮಟ್ಟ ಸುಧಾರಣೆಯೊಂದಿಗೆ ಸ್ವಾವಲಂಬಿಜೀವನಕ್ಕೆ ಕಾಯಕಲ್ಪ ನೀಡಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್.ಮಂಜುನಾಥ್ ಹೇಳಿದರು.

ಅವರು ಮಂಗಳವಾರ ಗುರುವಾಯನಕೆರೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮಾಭಿವೃದ್ಧಿಯೋಜನೆಯ ಕಾರ್ಯಕರ್ತರ ಪ್ರಾಮಾಣಿಕತೆ ಮತ್ತು ಸೇವಾ ಕಳಕಳಿ ಹಾಗೂ ಫಲಾನುಭವಿಗಳ ನಿರಂತರ ಪರಿಶ್ರಮ ಮತ್ತು ಪ್ರಯತ್ನವೇ ಯೋಜನೆಯ ಯಶಸ್ವಿನ ಗುಟ್ಟು ಎಂದು ಅವರು ಅಭಿಪ್ರಾಯ ಪಟ್ಟರು.

ಅವಿಭಜಿತ ದಕ್ಷಿಣಕನ್ನಡಜಿಲ್ಲೆಯಲ್ಲಿ ಯೋಜನೆಯ ಸ್ವ-ಸಹಾಯ ಸಂಘಗಳು ವಾರ್ಷಿಕ 1400 ಕೋಟಿರೂ. ವ್ಯವಹಾರ ನಡೆಸುತ್ತಿವೆ. ಬೆಳ್ತಂಗಡಿ ತಾಲ್ಲೂಕಿನಲ್ಲಿ 4200 ಪ್ರಗತಿ ಬಂಧು ಒಕ್ಕೂಟಗಳಿದ್ದು 1700 ಸ್ವ-ಸಹಾಯ ಸಂಘದ ಕುಟುಂಬಗಳು ಫಲಾನುಭವಿಗಳಾಗಿ ಪ್ರಗತಿಯ ಪಾಲುದಾರರಾಗಿದ್ದಾರೆ ಎಂದರು.

ಕುವೆಟ್ಟುಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್‍ಕೋಟ್ಯಾನ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಎಂ ಶೆಟ್ಟಿ, ತಾ.ಪಂ ಸದಸ್ಯರುಗಳಾದ ಕೃಷ್ಣ ಆಚಾರ್ಯ, ಗೋಪಿನಾಥ್ ನಾಯಕ್, ಕೇಶವತಿ, ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷ ಪ್ರಭಾಕರ್ ಹೊಸಂದೋಡಿ, ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷೆ ಶಾರದಾ ರೈ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ) ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್, ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಮೊದಲಾದವರು ಉಪಸ್ಥಿತರಿದ್ದರು.

ಗ್ರಾಮಾಭಿವೃದ್ಧಿಯೋಜನೆಯ ದ.ಕ.ಜಿಲ್ಲಾಯೋಜನಾಧಿಕಾರಿ ಸತೀಶ್ ಶೆಟ್ಟಿ ಸ್ವಾಗತಿಸಿದರು. ತಾಲ್ಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ ಧನ್ಯವಾದವಿತ್ತರು. ಯಶವಂತ್, ಎಸ್. ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News