ವಿಶ್ವವಿದ್ಯಾಲಯ ಘಟಕ ನಿರ್ಮಾಣ ಸ್ಥಳದ ಮರ ತೆರವು ಮಾಡದ ಅರಣ್ಯ ಇಲಾಖೆ: ಸದಸ್ಯರ ಆಕ್ರೋಶ

Update: 2019-06-25 14:08 GMT

ಪುತ್ತೂರು; ನೆಲ್ಯಾಡಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಘಟಕ ನಿರ್ಮಾಣಕ್ಕೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೆ ನಂತರ 25 ಎಕ್ರೆ ಸ್ಥಳ ಮಂಜೂರಾಗಿದ್ದು, ಇದರಲ್ಲಿರುವ ಮರಗಳನ್ನು ಅರಣ್ಯ ಇಲಾಖೆ ತೆರವು ಮಾಡದ ಕಾರಣ ಕಟ್ಟಡ ನಿರ್ಮಾಣಕ್ಕೆ ತೊಂದರೆಯಾಗುತ್ತಿದೆ. ಇಲಾಖೆ ನಿರ್ಲಕ್ಷ್ಯ ಧೋರಣೆಯಿಂದ ಮಕ್ಕಳ ಭವಿಷ್ಯಕ್ಕೆ ತಡೆ ಹಾಕುತ್ತಿದೆ. ಮುಂದಿನ ತಾಪಂ ಸಾಮಾನ್ಯ ಸಭೆಯ ಮೊದಲು ಅರಣ್ಯ ಇಲಾಖೆ ಮರ ತೆರವು ಮಾಡದಿದ್ದರೆ ಇಲ್ಲಿನ ಜನತೆಯನ್ನು ಒಟ್ಟು ಸೇರಿಸಿ ಸಾಮೂಹಿಕವಾಗಿ ಮರಗಳನ್ನು ಕಡಿಯುತ್ತೇವೆ ಎಂದು ಅರಣ್ಯ ಇಲಾಖೆಗೆ ತಾಲೂಕು ಪಂಚಾಯತ್ ಸಭೆಯಲ್ಲಿ ಸದಸ್ಯರು ಎಚ್ಚರಿಕೆ ನೀಡಿದ ಘಟನೆ ಪುತ್ತೂರು ತಾಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು. 

ಮಂಗಳವಾರ ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯ ಪಾಲನಾ ವರದಿ ಸಂದರ್ಭದಲ್ಲಿ ಮಾತನಾಡಿದ ತಾಪಂ ಸದಸ್ಯೆ ಉಷಾ ಅಂಚನ್ ಮತ್ತು ಜಿಪಂ ಸದಸ್ಯ ಸರ್ವೋತ್ತಮ ಗೌಡ ಅವರು ಮಂಗಳೂರು ವಿವಿ ಘಟಕದಿಂದ ಈ ಭಾಗದ ಎಷ್ಟೋ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಅರಣ್ಯ ಇಲಾಖೆ ಮರ ತೆರವು ಮಾಡಲು ವಿನಾ ಕಾರಣ ವಿಳಂಬ ನೀತಿ ಅನುಸರಿಸುತ್ತಿದೆ. ಇದರಿಂದ ಘಟಕದ ಕಟ್ಟಡ ನಿರ್ಮಾಣವಾಗಲು ತಡವಾಗುತ್ತಿದೆ. ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿ ತರಗತಿ ನಡೆಯುತ್ತಿದೆ. ನೀವ್ಯಾಕೆ ಮಕ್ಕಳ ಭವಿಷ್ಯದ ಜತೆ ಆಟವಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸರ್ಕಾರದ ಸ್ಥಳವಾಗಿರುವ ಸರ್ವೆ ನಂಬ್ರ 186/1ರಲ್ಲಿ 25 ಎಕ್ರೆ ಪ್ರದೇಶದ ಪಹಣಿ ಮಂಗಳೂರು ವಿಶ್ವವಿದ್ಯಾಲಯದ ಹೆಸರಲ್ಲಿದೆ. ನಕ್ಷೆಯೂ ಆಗಿದೆ. ಹಾಗಿದ್ದರೂ ಕಳೆದ 2 ವರ್ಷಗಳಿಂದ ಅರಣ್ಯ ಇಲಾಖೆ ಉದ್ದೇಶ ಪೂರ್ವಕ ಮೇಲಾಧಿಕಾರಿಗಳಿಗೆ ಬರೆಯಲಾಗಿದೆ ಎಂಬ ಕುಂಟು ನೆಪ ಹೇಳಿ ಸಮಸ್ಯೆ ಉಂಟು ಮಾಡುತ್ತಿದೆ ಎಂದು ಅವರು ದೂರಿದರು. ಈ ಬಗ್ಗೆ ಜಿಪಂ ಸಭೆಯಲ್ಲಿ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಭಾಗವಹಿಸುತ್ತಾರೆ. ಅಲ್ಲಿ ಈ ವಿಷಯ ಪ್ರಸ್ತಾಪಿಸುವಂತೆ ತಾಪಂ ಕಾರ್ಯನಿರ್ವಹಣಾಧಿಕಾರಿ ಎಸ್.ಜಗದೀಶ್ ಜಿಪಂ ಸದಸ್ಯರಿಗೆ ಸಲಹೆ ನೀಡಿದರು. 

ಎಂಡೋ ಪೀಡಿತ ಯುವತಿಯೊಬ್ಬರಿಗೆ ಸರ್ಕಾರದಿಂದ ಹಣ ಬಂದರೂ ಕೈಗೆ ಸಿಗುತ್ತಿಲ್ಲ. ಕಂದಾಯ ಇಲಾಖೆಯಿಂದ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯೆ ಕೆ.ಟಿ.ವಲ್ಸಮ್ಮ ಹೇಳಿದರು. ಇಚಿಲಂಪಾಡಿಯ ಯುವತಿಯೊಬ್ಬರು ಶೇ.100 ಎಂಡೋ ಪೀಡಿತರಾಗಿದ್ದು, ಕಳೆದ 4 ವರ್ಷಗಳಿಂದ ಸರ್ಕಾರದಿಂದ ವೇತನ ಬರುತ್ತಿದ್ದರೂ ಅದನ್ನು ಪಡೆದುಕೊಳ್ಳಲು ಅವರಿಂದ ಸಾಧ್ಯವಾಗುತ್ತಿಲ್ಲ. ಬಂದ ಹಣ ಅಂಚೆ ಕಚೇರಿಯಲ್ಲಿ ಅವರ ಖಾತೆಯಲ್ಲಿದೆ. ಇದರಲ್ಲಿ ರೂ.1.50 ಲಕ್ಷ ಹಣವಿದೆ. ಓಡಾಡಲು ಸಾಧ್ಯವೇ ಇಲ್ಲದ ಇವರಿಗೆ ಹಣ ಪಡೆಯಲು ಅಸಾಧ್ಯವಾಗಿದೆ ಎಂದರು. ಈ ಬಗ್ಗೆ ಕಾನೂನು ಸರಳೀಕರಣಗೊಳಿಸಿ ಫಲಾನುಭವಿಗಳ ಕೈಗೆ ಹಣ ಒದಗಿಸುವ ಹಾಗೆ ಕ್ರಮಕೈಗೊಳ್ಳಲು ನಿರ್ಣಯ ಕೈಗೊಳ್ಳುವುದಾಗಿ ಅಧ್ಯಕ್ಷರು ತಿಳಿಸಿದರು. ಸಂಧ್ಯಾ ಸುರಕ್ಷೆ ಈಗ ಇಂದಿರಾ ಗಾಂಧಿ ವೃದ್ಧಾಪ್ಯ ವೇತನವಾಗಿ ಬದಲಾಗಿದ್ದರೂ ಸಮರ್ಪಕವಾಗಿ ಜನತೆಗೆ ಮುಟ್ಟುತ್ತಿಲ್ಲ. ಆದೇಶ ನೀಡಿದ 50ಕ್ಕೂ ಹೆಚ್ಚು ಕಡತಗಳು ಬಾಕಿಯಾಗಿವೆ ಎಂದು ಸದಸ್ಯೆ ಆಶಾ ಲಕ್ಷಣ ಹೇಳಿದರು.

ಕಡಬ ವೈದ್ಯರ ವರ್ಗಾವಣೆ: ಸದಸ್ಯರ ಆಕ್ರೋಶ
ತೀವ್ರವಾದ ಡೆಂಗ್ ಮತ್ತು ಮಲೇರಿಯಾ ಜ್ವರದಿಂದ ಕಡಬ ಪ್ರದೇಶ ತತ್ತರಿಸುತ್ತಿದೆ. ಈ ಸಂದರ್ಭದಲ್ಲಿಯೇ ಕಡಬ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿದ್ದ ಒಬ್ಬ ವೈದ್ಯರನ್ನು ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಕಡಬದ ಜನತೆಗೆ ತೀರಾ ಸಮಸ್ಯೆಯಾಗಿದೆ. ಇದೀಗ ಕಡಬ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ. ಯಾವ ಮಾನದಂಡದಲ್ಲಿ ಇರುವ ವೈದ್ಯರನ್ನು ವರ್ಗಾವಣೆ ಮಾಡಿದ್ದೀರಿ ಎಂದು ಜಿಪಂ ಸದಸ್ಯ ಪಿ.ಪಿ.ವರ್ಗಿಸ್, ತಾಪಂ ಸದಸ್ಯರಾದ ಫಝಲ್ ಕೋಡಿಂಬಾಳ, ಉಷಾ ಅಂಚನ್, ಪಿ.ವೈ.ಕುಸುಮಾ ತಾಲೂಕು ಆರೋಗ್ಯಾಧಿಕಾರಿ ಅವರನ್ನು ತರಾಟೆಗೆ ತೆಗೆದುಕೊಂಡರು. ತಕ್ಷಣವೇ ಈ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಅವರು ಆಗ್ರಹಿಸಿದರು. 

ಜನತೆ ಮತ್ತು ವಿದ್ಯಾರ್ಥಿಗಳ ಸೌಲಭ್ಯಕ್ಕಾಗಿ ಸಿಟಿಬಸ್ ಕೇಳಿದರೆ ಇರುವ ಬಸ್ ನ್ನು ಕೆಎಸ್ಸಾರ್ಟಿಸಿ ಬಂದ್ ಮಾಡಿದೆ ಎಂದು ಸದಸ್ಯೆ ಉಷಾ ಅಂಚನ್ ಕೆಎಸ್ಸಾರ್ಟಿಸಿ ಅದಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನೆಲ್ಯಾಡಿ ಇಚಿಲಂಪಾಡಿ ಕಡಬ ಭಾಗಗಳ ಜನತೆಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಿಟಿ ಬಸ್ ಸೌಲಭ್ಯ ಒದಗಿಸಲು 5 ತಿಂಗಳ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದೆ. ಇದೀಗ ಬೆಳಿಗ್ಗೆ 7.15ರ ನೆಲ್ಯಾಡಿ-ಪುತ್ತೂರು ಬಸ್ಸನ್ನೇ ಬಂದ್ ಮಾಡಲಾಗಿದೆ. ಇದರಿಂದ ಪುತ್ತೂರಿಗೆ ಬರುವ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದ ಅವರು ಬಸ್ ಸ್ಥಗಿತಗೊಳಿಸಿ ಸಮಸ್ಯೆ ಉಂಟು ಮಾಡಿದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಹೇಳಿದರು. ಈ ಬಗ್ಗೆ ಕೆಎಸ್ಸಾರ್ಟಿಸಿ ಇಲಾಖಾ ಸಭೆ ಕರೆದು  ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷರು ತಿಳಿಸಿದರು.

ವೇದಿಕೆಯಲ್ಲಿ ತಾಪಂ ಉಪಾಧ್ಯಕ್ಷೆ ರಾಜೇಶ್ವರಿ, ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ಡಿವೈಎಸ್‍ಪಿ ದಿನಕರ್ ಶೆಟ್ಟಿ, ನರೇಗಾ ಸಹಾಯಕ ನಿರ್ದೇಶಕ ನವೀನ್ ಭಂಡಾರಿ ಇದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಎಸ್.ಜಗದೀಶ್ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News