ಭಟ್ಕಳ: ನ್ಯೂ ಇಂಗ್ಲಿಷ್ ಪಿಯು ಕಾಲೇಜಿನಲ್ಲಿ 'ನೆರೆ ಹೊರೆಯ ಯುವ ಸಂಸತ್ತು' ಕಾರ್ಯಕ್ರಮ

Update: 2019-06-25 14:28 GMT

ಭಟ್ಕಳ: ಯುವ ಜನತೆ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಸಮಯವನ್ನು ಸದ್ಭಳಕೆ ಮಾಡಿಕೊಂಡರೆ ದೇಶದ ಪ್ರಗತಿಯಲ್ಲಿ ಕೊಡುಗೆ ನೀಡಲು ಸಾಧ್ಯ ಎಂದು ಡಾ.ಸುರೇಶ ನಾಯಕ ಹೇಳಿದರು.

ಅವರು ದಿ. ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜು ಸಭಾಂಗಣದಲ್ಲಿ ನೆಹರು ಯುವ ಕೇಂದ್ರ ಹಾಗೂ ನ್ಯೂ ಇಂಗ್ಲಿಷ್ ಪಿಯು ಕಾಲೇಜ್ ಇದರ ಸಹಯೋಗದೊಂದಿಗೆ ಆಯೋಜಿಸಿದ್ದ ‘ನೆರೆ ಹೊರೆಯ ಯುವ ಸಂಸತ್ತು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತ ಸರಕಾರವು ಯುವ ಜನತೆಗಾಗಿ ಅನೇಕ ಕಾರ್ಯಕ್ರಮಗಳನ್ನು ಪರಿಚಯಿಸುತ್ತಿದ್ದು, ಯುವಕರು ಅವುಗಳ ಸದುಪಯೋಗ ಮಾಡಿಕೊಳ್ಳಬೇಕೆಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ನೆಹರು ಯುವ ಕೇಂದ್ರದ ಕಾರ್ಯಕ್ರಮ ಸಂಯೋಜಕ ವಿಪಿನ ಚಟ್ಟಾಯಮ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಂತರ ನಡೆದ ಕಾರ್ಯಾಗಾರದಲ್ಲಿ ಉಪನ್ಯಾಸಕಿ ಶ್ರೀಮತಿ. ನಾಗಲಕ್ಷ್ಮೀ ಯೋಗದ ಕುರಿತು, ಶ್ರೀ ಗುರು ಸುಧೀಂದ್ರ ಬಿಸಿಎ ಕಾಲೇಜಿನ ಪ್ರಾಂಶುಪಾಲರಾದ ಶ್ರೀನಾಥ ಪೈ ರಾಷ್ಟ್ರೀಯ ಪ್ರಮುಖ ಕಾರ್ಯಕ್ರಮಗಳ ಕುರಿತು,  ವಿಜಯ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಎಂ.ಆರ್.ನಾಯ್ಕ ಕೌಶಲ್ಯಾಭಿವೃದ್ಧಿಯ ಕುರಿತು ಮತ್ತು ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನರಸಿಂಹ ಮೂರ್ತಿಯವರು ಯೂತ್ ಕ್ಲಬ್‍ಗಳ ಕುರಿತು ಉಪನ್ಯಾಸ ನೀಡಿದರು.

ದಿ. ನ್ಯೂ ಇಂಗ್ಲಿಷ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ವಿರೇಂದ್ರ ಶ್ಯಾನಭಾಗ ಅಧ್ಯಕ್ಷತೆ ವಹಿಸಿದ್ದರು.  ವಿದ್ಯಾರ್ಥಿಗಳಾದ ವಾಣಿಶ್ರೀ ಹಾಗೂ ಸಂಗಡಿಗರು ಪ್ರಾರ್ಥಿಸಿದರು.  ಉಪನ್ಯಾಸಕಿ ಜ್ಯೋತಿ ಪ್ರಭು ನಿರ್ವಹಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News