ಗ್ರಾಮಚಾವಡಿಯ ಮದ್ಯದಂಗಡಿ ತೆರವುಗೊಳಿಸಲು ಸೂಚನೆ

Update: 2019-06-25 14:48 GMT

ಕೊಣಾಜೆ: ಹರೇಕಳ ಗ್ರಾಮದ ಗ್ರಾಮಚಾವಡಿಯಲ್ಲಿ ಶಿಕ್ಷಣ ಸಂಸ್ಥೆಯಿರುವ ಕಟ್ಟಡದಲ್ಲಿಯೇ ಏಕಾಏಕಿ ತೆರೆಯಲಾಗಿದ್ದ ಮದ್ಯದಂಗಡಿ ವಿರುದ್ಧ ಗ್ರಾಮಸ್ಥರು ಇತ್ತೀಚೆಗೆ ನಡೆಸಿದ ಹೋರಾಟದ ಫಲವಾಗಿ ವೈನ್‍ಶಾಪ್ ವರ್ಗಾಯಿಸುವಂತೆ ಸಚಿವ ಯು.ಟಿ.ಖಾದರ್ ಸೂಚಿಸಿದ್ದಾರೆ.

ಗ್ರಾಮಚಾವಡಿಯಲ್ಲಿರುವ ವಸತಿ ಸಮುಚ್ಛಯದಲ್ಲಿ ಕಳೆದ ಬುಧವಾರ ಏಕಾಏಕಿ ವೈನ್‍ಶಾಪ್ ಆರಂಭಗೊಂಡಿತ್ತು. ಈ ಕಟ್ಟಡದ ಮೇಲ್ಭಾಗದಲ್ಲಿ ಎಲ್‍ಕೆಜಿ ಮತ್ತು ಮಹಿಳಾ ಶರೀಯತ್ ಕಾಲೇಜು ಇದ್ದು, ಸುತ್ತಲೂ ಮನೆಗಳು, ಚರ್ಚ್, ಮಸೀದಿ, ಮಂದಿರವಿದೆ. ಗ್ರಾಮ ಪಂಚಾಯಿತಿ ಗಮನಕ್ಕೂ ಬಾರದೆ ಮದ್ಯದಂಗಡಿಯು ಇಲ್ಲಿ ಆರಂಭಗೊಂಡಿತ್ತು. 

ಮದ್ಯದಂಗಡಿಯ ವಿರುದ್ಧ ಕಳೆದ ಶುಕ್ರವಾರ ಗ್ರಾಮದ ಎಲ್ಲಾ ಸಂಘಟನೆಗಳು, ರಾಜಕೀಯ ಪಕ್ಷದ ಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಆಡಳಿತಗಾರರು ಒಂದಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ, ಮಧ್ಯದಂಗಡಿ ತೆರೆಯದಂತೆ ಎಚ್ಚರಿಕೆ ನೀಡಿದ್ದರು. 

ಈ ಹಿನ್ನೆಲೆಯಲ್ಲಿ ಸೋಮವಾರ ಸಚಿವ ಯು.ಟಿ.ಖಾದರ್ ಸಮ್ಮುಖದಲ್ಲಿ ವೈನ್‍ಶಾಪ್ ಮಾಲೀಕರು, ಅಬಕಾರಿ ಜಿಲ್ಲಾಧಿಕಾರಿ ಶೈಲಜಾ, ಪಂಚಾಯಿತಿ ಸದಸ್ಯರಾದ ಬದ್ರುದ್ದೀನ್ ಫರೀದ್‍ನಗರ, ಬಶೀರ್ ಉಂಬುದ, ಎಂ.ಪಿ.ಮಜೀದ್ ಅವರ ಉಪಸ್ಥಿತಿಯಲ್ಲಿ ಸಭೆ ನಡೆಸಿದ್ದರು. ಈ ಸಭೆಯಲ್ಲಿ ವೈನ್‍ಶಾಪ್ ಮಾಲಕರು ಮಾಡಿದ ಮನವಿಗೆ ಪಂಚಾಯತ್ ಸದಸ್ಯರು ಸಮ್ಮತಿ ಸೂಚಿಸದೆ, ಗ್ರಾಮಸ್ಥರ ಹಿತ ಮುಖ್ಯ ಎಂದರು.

ಈ ಹಿನ್ನೆಲೆಯಲ್ಲಿ ತಕ್ಷಣವೇ ವೈನ್‍ಶಾಪ್ ತೆರವುಗೊಳಿಸುವಂತೆ ಸಚಿವರು ಅಬಕಾರಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News