ಉಪ್ಪಿನಂಗಡಿ: ಟ್ಯಾಂಕರ್ ಢಿಕ್ಕಿ; ಜೀಪು ಕಂದಕಕ್ಕೆ
Update: 2019-06-25 20:47 IST
ಉಪ್ಪಿನಂಗಡಿ: ಜೀಪೊಂದಕ್ಕೆ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಜೀಪು ಕಂದಕಕ್ಕೆ ಉರುಳಿ ಜೀಪು ಚಾಲಕ ಗಾಯಗೊಂಡ ಘಟನೆ ಮಂಗಳವಾರ ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ನಡೆದಿದೆ.
34 ನೆಕ್ಕಿಲಾಡಿಯ ಕೊಳಕ್ಕೆ ನಿವಾಸಿ ಬಾಬು ಎಂಬವರ ಪುತ್ರ ಸತೀಶ್ ಕೆ. (32) ಗಾಯಗೊಂಡ ಜೀಪು ಚಾಲಕ. ಇವರು ತನ್ನ ಜೀಪನ್ನು ಉಪ್ಪಿನಂಗಡಿ ಕಡೆಯಿಂದ ಸಕಲೇಶಪುರದ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ನೀರಕಟ್ಟೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯ ಇಳಿಜಾರು ಪ್ರದೇಶದಲ್ಲಿ ಎದುರುಗಡೆಯಿಂದ ಬಂದ ಟ್ಯಾಂಕರ್ ವಿರುದ್ಧ ದಿಕ್ಕಿನಲ್ಲಿ ಬಂದು ಜೀಪಿಗೆ ಢಿಕ್ಕಿ ಹೊಡೆದಿದೆ. ಈ ಸಂದರ್ಭ ಚಾಲಕನ ನಿಯಂತ್ರಣ ಕಳೆದುಕೊಂಡ ಜೀಪು ಹೆದ್ದಾರಿ ಬದಿಯ ಸುಮಾರು 10 ಅಡಿ ಆಳಕ್ಕೆ ಬಿದ್ದಿದೆ.
ಘಟನೆಯಲ್ಲಿ ಜೀಪು ಚಾಲಕ ಸತೀಶ್ ಅವರಿಗೆ ಗಾಯವಾಗಿದ್ದು, ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.