ದೇಶದ ಅರ್ಧಕ್ಕೂ ಹೆಚ್ಚು ಸಂಪತ್ತು ಶೇ.1ರಷ್ಟಿರುವ ಅತ್ಯಂತ ಶ್ರೀಮಂತರ ಕೈಯಲ್ಲಿ!

Update: 2019-06-25 16:31 GMT

ಹೊಸದಿಲ್ಲಿ, ಜೂ.25: ದೇಶದ ಅರ್ಧಕ್ಕೂ ಹೆಚ್ಚು ಸಂಪತ್ತು ಶೇ.1 ಅತ್ಯಂತ ಶ್ರೀಮಂತರ ಕೈಯಲ್ಲಿದೆ. ಶೇ. 1 ಭಾರತೀಯರು ದೇಶದ ಒಟ್ಟು ಸಂಪತ್ತಿನ ಶೇ.58.4 ಹೊಂದಿದ್ದಾರೆ ಮತ್ತು ಸಂಪತ್ತಿನ ಈ ಅಸಮಾನತೆಯು 2000 ಮತ್ತು 2017ರ ಮಧ್ಯೆ ಆರು ಪಟ್ಟು ಹೆಚ್ಚಾಗಿದೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಪ್ರೆಸ್‌ನ ನೂತನ ವರದಿ ತಿಳಿಸಿದೆ.

ಈ ವರದಿಯನ್ನು ಮಾಜಿ ಪ್ರಧಾನಿ ಡಾ.ಮನ್‌ಮೋಹನ್ ಸಿಂಗ್ ಅವರು ಬಿಡುಗಡೆ ಮಾಡಿದ್ದಾರೆ ಹೆಚ್ಚುತ್ತಿರುವ ಅಸಮಾನತೆ ಹೆಸರಿನ ವರದಿಯನ್ನು ಸಾಮಾಜಿಕ ಅಭಿವೃದ್ಧಿ ಮಂಡಳಿ (ಸಿಎಸ್‌ಡಿ) ಸಂಶೋಧನಾ ಸಂಸ್ಥೆ ತಯಾರಿಸಿದೆ. ಶೇ.10 ಅತ್ಯಂತ ಶ್ರೀಮಂತ ಭಾರತೀಯರು ದೇಶದ ಒಟ್ಟು ಸಂಪತ್ತಿನ ಶೇ.80.7ನ್ನು ಹೊಂದಿದ್ದಾರೆ. ರಾಷ್ಟ್ರ ಸಂಪತ್ತಿನಲ್ಲಿ ಶೇ.1 ಅತ್ಯಂತ ಶ್ರೀಮಂತರ ಪಾಲು 2015ರಲ್ಲಿ ಶೇ.22 ಇತ್ತು. ಈ ಪ್ರಮಾಣ 1980ರ ದಶಕದಲ್ಲಿ ಶೇ.6 ಆಗಿತ್ತು ಎಂದು ವರದಿ ತಿಳಿಸಿದೆ. ಸಿಎಸ್‌ಡಿ ಉಪನ್ಯಾಸಕ ಟಿ.ಹಕ್ ಮತ್ತು ಹೈದರಾಬಾದ್ ವಿಶ್ವವಿದ್ಯಾನಿಲಯದ ನಿವೃತ್ತ ಉಪನ್ಯಾಸಕ ಡಿ.ನರಸಿಂಹ ರೆಡ್ಡಿ ಸಂಪಾದಿಸಿರುವ ವರದಿಯು ಖ್ಯಾತ ಅರ್ಥಶಾಸ್ತ್ರಜ್ಞರು ಮತ್ತು ಸಾಮಾಜಿಕ ಪರಿಣತರು ಬರೆದಿರುವ 22 ಅಧ್ಯಾಯಗಳನ್ನು ಹೊಂದಿದೆ. ಇದರಲ್ಲಿ ಪ್ರಾದೇಶಿದಿಂದ ವಲಯವಾರುವರೆಗಿನ ಅಸಮಾನತೆಯ ವಿವಿಧ ಆಯಾಮಗಳನ್ನು ಉಲ್ಲೇಖಿಸಲಾಗಿದೆ.

 ಹೆಚ್ಚುತ್ತಿರುವ ಅಸಮಾನತೆಯು ಮುಖ್ಯವಾದ ಕ್ಷೇತ್ರೀಯ ಆಯಾಮವನ್ನು ಹೊಂದಿದೆ. ಬಿಹಾರ, ಚತ್ತೀಸ್‌ಗಡ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳಲ್ಲಿ ಕೃಷಿಯೇತರ ಕ್ಷೇತ್ರಗಳಲ್ಲಿ ದುಡಿಯುವ ಕಾರ್ಮಿಕರ ಆದಾಯ ಕೃಷಿ ಕ್ಷೇತ್ರದ ಆದಾಯಕ್ಕಿಂತ ಆರರಿಂದ ಹನ್ನೊಂದು ಪಟ್ಟು ಹೆಚ್ಚಾಗಿದೆ. ಅಖಿಲ ಭಾರತ ಮಟ್ಟದಲ್ಲೂ ಕೃಷಿವಲಯಕ್ಕಿಂತ ಮತ್ತು ಕೃಷಿಯೇತರ ವಲಯದ ಆದಾಯ ಬಹುತೇಕ ಐದು ಪಟ್ಟಿದೆ ಎಂದು ವರದಿ ತಿಳಿಸುತ್ತದೆ.

 ಸಾಮಾಜಿಕ ಅಭಿವೃದ್ಧಿ ಸೂಚಿಯನ್ನೂ ಈ ವರದಿಯು ಹೊಂದಿದೆ. ವರದಿಯ ಪ್ರಕಾರ, ಕೇರಳ, ಪಂಜಾಬ್, ಹಿಮಾಚಲ ಪ್ರದೇಶ, ಸಿಕ್ಕಿಂ ಮತ್ತು ಗೋವಾ ಸಾಮಾಜಿಕ ಅಭಿವೃದ್ಧಿಯ ಮುಂಚೂಣಿಯಲ್ಲಿದ್ದರೆ ಅಸ್ಸಾಂ, ಬಿಹಾರ, ಚತ್ತೀಸ್‌ಗಡ, ಒಡಿಶಾ ಮತ್ತು ಉತ್ತರ ಪ್ರದೇಶ ಕೊನೆಯ ಸಾಲಿನಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News