ಜೈ ಶ್ರೀ ರಾಮ್ ಹೇಳಿಸಿ ಥಳಿಸಿ ಹತ್ಯೆ ‘ಕ್ರೂರ ಅಪರಾಧ’: ಕೇಂದ್ರ ಸಚಿವ ನಕ್ವಿ

Update: 2019-06-25 16:37 GMT

ನಕ್ವಿ ಹೊಸದಿಲ್ಲಿ, ಜೂ. 25: ಜಾರ್ಖಂಡ್‌ನಲ್ಲಿ 24 ವರ್ಷದ ವ್ಯಕ್ತಿಯನ್ನು ಥಳಿಸಿ ಹತ್ಯೆಗೈದಿರುವುದನ್ನು ‘ಕ್ರೂರ ಅಪರಾಧ’ ಎಂದು ವ್ಯಾಖ್ಯಾನಿಸಿರುವ ಕೇಂದ್ರ ಅಲ್ಪಸಂಖ್ಯಾತ ಖಾತೆ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ, ‘ಜೈ ಶ್ರೀ ರಾಮ್’ ಎಂದು ಜನರನ್ನು ಅಪ್ಪಿಕೊಳ್ಳುವ ಮೂಲಕ ಘೋಷಿಸಬಹುದೇ ಹೊರತು, ಅವರ ಕತ್ತು ಹಿಸುಕಿ ಅಲ್ಲ ಎಂದಿದ್ದಾರೆ. ಹಜ್ ಯಾತ್ರಾರ್ಥಿಗಳ ತರಬೇತಿ ಕಾರ್ಯಕ್ರಮದ ನೇಪಥ್ಯದಲ್ಲಿ ನಕ್ವಿ ಈ ಹೇಳಿಕೆ ನೀಡಿದರು ಹಾಗೂ ಇಂತಹ ಘಟನೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕರೆ ನೀಡಿದರು. ಜಾರ್ಖಂಡ್‌ನ ಸರಯಕ್‌ಕೇಲಾ-ಖಾರಾಸವಾನ್‌ನಲ್ಲಿ ಮೋಟಾರ್‌ ಸೈಕಲ್ ಕಳವುಗೈದ ಆರೋಪದಲ್ಲಿ ತಬ್ರೇಝ್‌ನನ್ನು ಗುಂಪೊಂದು ಥಳಿಸಿ ಹತ್ಯೆ ನಡೆಸಿತ್ತು. ಅದಕ್ಕಿಂತ ಮೊದಲು ‘ಜೈ ಶ್ರೀರಾಮ್’ ಹಾಗೂ ‘ಜೈ ಹನುಮಾನ್’ ಎಂದು ಘೋಷಣೆಗಳನ್ನು ಕೂಗುವಂತೆ ಆತನನ್ನು ಗುಂಪು ಬಲವಂತಪಡಿಸಿತ್ತು. ಇಂತಹ ಘಟನೆಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಅಭಿವೃದ್ಧಿ ಕಾರ್ಯಸೂಚಿಯಲ್ಲಿ ವಿಭಜಕ ಕಾರ್ಯಸೂಚಿಗೆ ನಾವು ಅವಕಾಶ ನೀಡಲಾರೆವು ಎಂದು ನಕ್ವಿ ಹೇಳಿದ್ದಾರೆ.

ಇಂತಹ ಘಟನೆಗಳಲ್ಲಿ ಭಾಗಿಯಾಗುವ ಜನರ ಉದ್ದೇಶ ಸರಕಾರ ಸೃಷ್ಟಿಸಿದ ಸಕಾರಾತ್ಮಕ ವಾತಾವರಣವನ್ನು ಹಾಳು ಮಾಡುವುದು. ನಾವು ಈ ಘಟನೆಯನ್ನು ವಿರೋಧಿಸುತ್ತೇವೆ. ಇಂತಹ ಕ್ರೂರ ಕೃತ್ಯ ಎಸಗುವ ಜನರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News