ಶೆರಿನ್ ಮ್ಯಾಥ್ಯೂ ಸಾವು: ತಪ್ಪೊಪ್ಪಿಕೊಂಡ ದತ್ತು ತಂದೆ

Update: 2019-06-25 17:44 GMT

ಹ್ಯೂಸ್ಟನ್ (ಅಮೆರಿಕ), ಜೂ. 25: ತನ್ನ ಮೂರು ವರ್ಷದ ದತ್ತು ಪುತ್ರಿ ಶೆರಿನ್ ಮ್ಯಾಥ್ಯೂಸ್‌ಳನ್ನು ಕೊಂದ ಆರೋಪವನ್ನು ಎದುರಿಸುತ್ತಿರುವ ಭಾರತೀಯ ಅಮೆರಿಕನ್ ವ್ಯಕ್ತಿಯು, ಕಡಿಮೆ ತೀವ್ರತೆಯ ಅಪರಾಧವನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಮಾಧ್ಯಮ ವರದಿಗಳು ಹೇಳಿವೆ.

39 ವರ್ಷದ ವೆಸ್ಲಿ ಮ್ಯಾಥ್ಯೂಸ್ ಮಗುವನ್ನು ಕೊಂದು ದೇಹವನ್ನು ಉಪನಗರ ಡಲ್ಲಾಸ್‌ನ ಚರಂಡಿಯೊಂದರಲ್ಲಿ ಅಡಗಿಸಿಟ್ಟಿದ್ದಾನೆ ಎಂಬ ಆರೋಪವನ್ನು ಎದುರಿಸುತ್ತಿದ್ದಾನೆ.

 ಡಲ್ಲಾಸ್ ಜಿಲ್ಲಾ ನ್ಯಾಯಾಲಯದಲ್ಲಿ ಸೋಮವಾರ ಅವರ ವಿರುದ್ಧದ ಕೊಲೆ ಪ್ರಕರಣದ ವಿಚಾರಣೆ ಆರಂಭಗೊಳ್ಳುವ ಮೊದಲೇ, ನಿರ್ಲಕ್ಷದ ಮೂಲಕ ಮಗುವಿಗೆ ಗಾಯ ಉಂಟು ಮಾಡಿದ ಆರೋಪವನ್ನು ಒಪ್ಪಿಕೊಂಡಿದ್ದಾನೆ. ಕಡಿಮೆ ತೀವ್ರತೆಯ ಅಪರಾಧಕ್ಕೆ ಕಡಿಮೆ ತೀವ್ರತೆಯ ಶಿಕ್ಷೆಯಾಗುವ ಸಾಧ್ಯತೆಯಿದೆ.

10 ವರ್ಷಕ್ಕಿಂತ ಕೆಳಗಿನ ಮಕ್ಕಳ ಗುರುತರ ಕೊಲೆ ಆರೋಪವು ಅವನ ವಿರುದ್ಧ 2017 ಅಕ್ಟೋಬರ್‌ನಲ್ಲಿ ದಾಖಲಾಗಿತ್ತು.

ಈ ಆರೋಪ ಸಾಬೀತಾದರೆ ವೆಸ್ಲಿಗೆ ಪರೋಲ್ ಇಲ್ಲದೆ ಜೀವಮಾನವಿಡೀ ಜೈಲಿನಲ್ಲಿ ಕಳೆಯುವ ಶಿಕ್ಷೆ ವಿಧಿಸಬಹುದಾಗಿದೆ. ಈಗ ನಿರ್ಲಕ್ಷದಿಂದಾಗಿ ಮಗುವಿಗೆ ಗಾಯ ಉಂಟು ಮಾಡಿದ ಆರೋಪ ದಾಖಲಾದರೆ, 30 ವರ್ಷ ಜೈಲಿನಲ್ಲಿ ಕಳೆದ ಬಳಿಕ ಪರೋಲ್‌ನಲ್ಲಿ ಹೊರಬರುವ ಅವಕಾಶವಿರುತ್ತದೆ.

ಭಾರತೀಯ ಮಗುವಿನ ದುರಂತ ಅಂತ್ಯವು 2017ರ ಅಕ್ಟೋಬರ್‌ನಲ್ಲಿ ಅಂತರ್‌ರಾಷ್ಟ್ರೀಯ ಗಮನವನ್ನು ಸೆಳೆದಿತ್ತು.

ವೆಸ್ಲಿ ಮ್ಯಾಥ್ಯೂಸ್ ಮತ್ತು ಅವನ ಪತ್ನಿ ಸಿನಿ ಇಬ್ಬರೂ ಕೇರಳದವರು. ಅವರು 2016ರಲ್ಲಿ ಬಿಹಾರದ ಅನಾಥಾಶ್ರಮವೊಂದರಿಂದ ಶೆರಿನ್‌ಳನ್ನು ದತ್ತು ತೆಗೆದುಕೊಂಡಿದ್ದರು. ನೋಂದಾಯಿತ ನರ್ಸ್ ಆಗಿರುವ ಸಿನಿ ವಿರುದ್ಧ ಆರಂಭದಲ್ಲಿ ಮಗುವನ್ನು ಅಪಾಯಕ್ಕೆ ಸಿಲುಕಿಸಿದ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಪುರಾವೆ ಕೊರತೆಯ ಹಿನ್ನೆಲೆಯಲ್ಲಿ ಬಳಿಕ ಪ್ರಾಸಿಕ್ಯೂಟರ್‌ಗಳು ಅವರ ವಿರುದ್ಧದ ಆರೋಪವನ್ನು ಕೈಬಿಟ್ಟಿದ್ದಾರೆ.

ಮುಂಜಾನೆ 3 ಗಂಟೆಗೆ ಮಗುವನ್ನು ಹೊರಗೆ ನಿಲ್ಲಿಸಿದ್ದೆ ಎಂದಿದ್ದ ಆರೋಪಿ!

ಶೆರಿನ್ ನಾಪತ್ತೆಯಾಗಿರುವ ವಿಷಯವನ್ನು ಮ್ಯಾಥ್ಯೂಸ್ 2017 ಅಕ್ಟೋಬರ್ 7ರಂದು ಪೊಲೀಸರಿಗೆ ತಿಳಿಸಿದ್ದನು. ಹಾಲು ಕುಡಿಯಲು ನಿರಾಕರಿಸಿರುವುದಕ್ಕಾಗಿ ಮುಂಜಾನೆ 3 ಗಂಟೆಗೆ ಮಗುವನ್ನು ಮನೆಯ ಹಿಂದಿನ ಮರದ ಬಳಿ ಬಿಟ್ಟಿದ್ದಾಗಿ ಆರಂಭಿಕ ಹೇಳಿಕೆಯಲ್ಲಿ ಅವನು ತಿಳಿಸಿದ್ದನು. 15 ನಿಮಿಷದ ಬಳಿಕ ಹೋಗಿ ನೋಡಿದಾಗ ಮಗು ನಾಪತ್ತೆಯಾಗಿತ್ತು ಎಂದಿದ್ದನು.

ಮಗುವಿನ ದೇಹವು ಎರಡು ವಾರಗಳ ಬಳಿಕ, ಸಮೀಪದ ಚರಂಡಿಯಲ್ಲಿ ಪತ್ತೆಯಾಗಿತ್ತು. ಆಗ ತನ್ನ ಹೇಳಿಕೆಯನ್ನು ಬದಲಿಸಿದ ಮ್ಯಾಥ್ಯೂಸ್, ತಾನು ತನ್ನ ದತ್ತು ಪುತ್ರಿಗೆ ಬಲವಂತವಾಗಿ ಹಾಲು ಕುಡಿಸಿದಾಗ ಮಗುವಿನ ಉಸಿರುಗಟ್ಟಿತು ಎಂದು ಹೇಳಿದ್ದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News