ಕೊಕ್ಕಡ ತಹಶೀಲ್ದಾರ್ ಎಂಡೋ ಸಂತ್ರಸ್ಥ ಪೋಷಕರ ಮಾತುಕತೆ

Update: 2019-06-25 17:47 GMT

ಬೆಳ್ತಂಗಡಿ: ಕೊಕ್ಕಡ ಮತ್ತು ಕೊಯಿಲದಲ್ಲಿ ಕಾರ್ಯಾಚರಿಸುತ್ತಿರುವ ಎಂಡೀಪಾಲನ ಕೇಂದ್ರಗಳಿಗೆ ನಿರ್ವಹಣೆಯ ಗುತ್ತಿಗೆಯನ್ನು ಪಡೆದ ಸಂಸ್ಥೆಯವರಿಗೆ ನೀಡಿದ ಕಾರಣ ಸಂತ್ರಸ್ಥರು ಕೇಂದ್ರಕ್ಕೆ ಬಾರದೆ ಉಳಿದ ಘಟನೆಯ ಕುರಿತಂತೆ ಬೆಳ್ತಂಗಡಿ ತಹಸೀಲ್ದಾರ್ ಡಾ. ಗಣಪತಿ ಶಾಸ್ರಿ ಯವರು ಸಂತ್ರಸ್ಥ ಪೋಷಕರ ಸಭೆಯನ್ನು ಮಂಗಳವಾರದಂದು ಕೊಕ್ಕಡದ ಗ್ರಾ.ಪಂ.ಸಭಾಂಗಣದಲ್ಲಿ ನಡೆಸಿದರು.

ತಹಶೀಲ್ದಾರ್ ರವರು ಮಾತನಾಡಿ ಎಂಡೋ ಪಾಲನಾ ಕೇಂದ್ರಗಳು ಸರಕಾರದ ಅಧೀನ ಸಂಸ್ಥಯಾಗಿರುವುದರಿಂದ ಸಂಸ್ಥೆಯನ್ನು ನಿರ್ವಹಿಸಲು ಸರಕಾರದ ನಿಯಮಾವಳಿಯಂತೆ ಟೆಂಡರ್ ಪ್ರಕ್ರಿಯೆ ಕರೆಯಲಾಗುತ್ತದೆ. ಈಹಿಂದೆ ನಡೆಸುತ್ತಿದ್ದ ಸಂಸ್ಥೆಯವರಿಗೆ ನೀಡಲಾಗಿದ್ದ ಅವಧಿ ಮುಗಿದಿರುವ ಕಾರಣ ಇದೀಗ ನಿಯಮದಂತೆ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ.

ಈಗ ಗುತ್ತಿಗೆ ಪಡೆದ ಸಂಸ್ಥೆಯವರು ಈ ಕೇಂದ್ರವನ್ನ ಸರಿಯಾಗಿ ನಡೆಸಲು ಬೇಕಾದ ಮಾರ್ಗಸೂಚಿಯನ್ನು ನೀಡಲಾಗಿದೆ. ಇದರಂತೆ ಈ ಸಂಸ್ಥೆ ಕಡೆಯಿಂದ ನಿರ್ವಹಿಸಲಾಗುತ್ತದೆಯೋ, ಇಲ್ಲವೋ ಎನ್ನುವುದನ್ನು ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳು ಪರಿಶೀಲಿಸುತ್ತಾರೆ. ಸೂಚನೆಯಂತೆ ನಿರ್ವಹಿಸಲಾಗುತ್ತಿದೆಯೋ, ಇಲ್ಲವೋ ಎನ್ನುವುದನ್ನು ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖಾಧಿಕಾರಿಗಳು ಪರಿಶೀಲಿಸಲಾಗಿ ಸೂಚನೆಗೆ ಸರಿಯಾಗಿ ನಿರ್ವಹಿಸದೇ ಇದ್ದಲ್ಲಿ ಕೂಡಲೇ ಜಿಲ್ಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಿ ನಿರ್ವಹಣೆಯ ಹೊಣೆಯನ್ನು ಬದಲಿಸಲಾಗುವುದು.

ಸರಕಾರದ ನಿಯಮಾವಳಿಗಳ ಪ್ರಕ್ರಿಯೆಯನ್ನು ಪಾಲಿಸಲು ಅವಕಾಶ ನೀಡದೇ, ಸಂತ್ರಸ್ಥರನ್ನು ಕಳುಹಿಸದೇ ಪಟ್ಟುಹಿಡಿದಲ್ಲಿ ಈ ವ್ಯವಸ್ಥೆಯನ್ನು ಸಂತ್ರಸ್ಥರು ಬಳಸಿಕೊಳ್ಳುತ್ತಿಲ್ಲ ಎಂದು ಕೈಬಿಟ್ಟು ಹೋಗುವ ಸಾಧ್ಯತೆಯೂ ಇರುವ ಕಾರಣ ಇರುವ ಅವಕಾಶ ಕಳೆದುಕೊಳ್ಳುವುದು ಬೇಡ ಎಂದು ವಿವರಿಸಿದರು. ಈ ಸಭೆಯಲ್ಲಿ ಬೆಳ್ತಂಗಡಿ ತಾಲೂಕು ವೈದ್ಯಾಧಿಕಾರಿ ಡಾ. ಕಲಾಮಧು ಶೆಟ್ಟಿ, ಉಪತಹಶೀಲ್ದಾರ್ ಪ್ರತೀಕ್ ಷಾ, ಆರೋಗ್ಯ ನಿರೀಕ್ಷಕ ಗಿರೀಶ್, ಎಂಡೋ ಸಂತ್ರಸ್ಥ ಪೋಷಕರ ಸಮಿತಿ ಅಧ್ಯಕ್ಷೆ ರೇವತಿ ತಾಮಣಕರ್, ಮಹಾದೇವ ತಾಮಣಕರ್, ರಾಮಣ್ಣ ಗೌಡ ಹಳ್ಳಿಂಗೇರಿ, ಸೇಸಪ್ಪ ಗೌಡ ಆಂತ್ರಳಿಕೆ, ಯಶೋಧ, ಮತ್ತಿತರರು ಉಪಸ್ಥಿತರಿದ್ದರು.

ಎಂಡೋ ಸಂತ್ರಸ್ಥ ಪೋಷಕರ ಬೇಡಿಕೆಗಳಾಗಿ , ಗುತ್ತಿಗೆ ಪಡೆದ ಸಂಸ್ಥೆಯು ಈಗಾಗಲೇ ಕೇಂದ್ರದಲ್ಲಿ ಸಂತ್ರಸ್ಥರೊಂದಿಗೆ ಒಗ್ಗಿ ಹೋಗಿರುವ ಪ್ರಸಕ್ತ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳನ್ನೆ ಮುಂದುವರೆಸಬೇಕು, ಕೊಕ್ಕಡದಲ್ಲಿ ಕೂಡಲೇ ಶಾಶ್ವತ ಎಂಡೋ ಪುನರ್ವಸತಿ ಕೇಂದ್ರ ತೆರೆಯಬೇಕು ಎನ್ನುವುದನ್ನು ಪೋಷಕರ ಪರವಾಗಿ ರಾಮಣ್ಣ ಗೌಡ ತಿಳಿಸಿದರು.

ಪ್ರಸಕ್ತ ಸಿಬ್ಬಂದಿಗಳನ್ನು ಮುಂದುವರೆಸುವ ಕುರಿತಂತೆ ಗುತ್ತಿಗೆ ಪಡೆದ ಸಂಸ್ಥೆಯವರಲ್ಲಿ ಮಾತುಕತೆ ನಡೆಸುವ ಭರವಸೆಯನ್ನು ಮತ್ತು ಶಾಶ್ವತ ಪುನರ್ವಸತಿ ಕೇಂದ್ರ ದ ಬಗ್ಗೆಯೂ ಗಮನ ಹರಿಸುವುದಾಗಿ ತಹಶೀಲ್ದಾರ್ ಭರವಸೆ ನೀಡುವುದರೊಂದಿಗೆ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲಾಯಿತು. ಹೊಸ ಗುತ್ತಿಗೆ ಪಡೆದ ಸಂಸ್ಥೆಯವರಿಗೆ ಸಾದ್ಯವಾದಷ್ಟು ಬೇಗ ಪಾಲನಾಕೇಂದ್ರ ಪುನರಾರಂಭಿಸಲು ಸೂಚಿಸುವುದಾಗಿ ತಹಶೀಲ್ದಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News