ಹೋಬಳಿ ಮಟ್ಟದಲ್ಲಿ ಕಂದಾಯ, ಪಿಂಚಣಿ ಅದಾಲತ್: ಐವನ್ ಡಿಸೋಜ

Update: 2019-06-26 08:19 GMT

ಮಂಗಳೂರು, ಜೂ.26: ಅರ್ಹ ಫಲಾನುಭವಿಗಳಿಗೆ ವಿವಿಧ ರೀತಿಯ ಪಿಂಚಣಿ ಸೌಲಭ್ಯವನ್ನು ಸಕಾಲ, ಕ್ಷಿಪ್ರ ಹಾಗೂ ಸಮರ್ಪಕಾಗಿ ಒದಗಿಸಲು ಸಾಧ್ಯವಾಗುವಂತೆ ಪ್ರತಿ ಹೋಬಳಿ ಮಟ್ಟದಲ್ಲಿ ವಿಶೇಷ ಆಂದೋಲನವಾಗಿ ಕಂದಾಯ ಅದಾಲತ್ ಹಾಗೂ ಪಿಂಚಣಿ ಅದಾಲತ್‌ಗಳನ್ನು ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಕಂದಾಯ ಇಲಾಖೆಗೆ ಸಂಂಬಧಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ. ದ.ಕ. ಜಿಲ್ಲೆಯ ತಾಲೂಕು ಮಟ್ಟದಲ್ಲೂ ಪ್ರಗತಿ ಪರಿಶೀಲನೆ ನಡೆಸಲಾಗಿದೆ ಎಂದರು.

ಪ್ರಗತಿ ಪರಿಶೀಲನೆಯ ಸಂದರ್ಭ ಕೆಲವೆಡೆ ಅಧಿಕಾರಿಗಳು ಯೋಜನೆ ಜಾರಿಗೆ ತರುವಲ್ಲಿ ಕಾನೂನಿನ ತೊಡಕಿನ ಬಗ್ಗೆ ಗಮನಕ್ಕೆ ತಂದಿದ್ದು, ಈ ಕುರಿತು ಅಧಿವೇಶನದಲ್ಲಿ ಗಮನ ಸೆಳೆಯುವ ಜತೆಯಲ್ಲಿ ಕಾನೂನಿನಲ್ಲೂ ಬದಲಾವಣೆಯನ್ನು ತರುವ ಕುರಿತು ಮುಖ್ಯಮಂತ್ರಿಯ ಗಮನ ಸೆಳೆಯಲಾಗುವುದು. ಈಗಾಗಲೇ ದ.ಕ. ಜಿಲ್ಲೆಯ ನಾಲ್ಕು ಹೊಸ ತಾಲೂಕುಗಳಲ್ಲಿ ಇಲಾಖೆಯ ಅಧಿಕಾರಿಗಳು ಕಚೇರಿಯನ್ನು ಆರಂಭಿಸಿದ್ದಾರೆ. ಉಳಿದ ಇಲಾಖೆ ಅಧಿಕಾರಿಗಳು ಆರಂಭಿಸುವಂತೆ ಸರಕಾರದ ಮೂಲಕ ಸೂಚನೆ ನೀಡಲಾಗಿದೆ ಎಂದರು.

ಪಿಂಚಣಿ ಎಲ್ಲರಿಗೂ ಸರಿಯಾಗಿ ಸಿಗುತ್ತಿಲ್ಲ ಎನ್ನುವ ಮಾತುಗಳು ಅದಾಲತ್ ಸಮಯದಲ್ಲಿ ಕೇಳಿ ಬಂದಿದೆ. ಈ ಕಾರಣಕ್ಕೆ ಹೋಬಳಿ ಮಟ್ಟದಲ್ಲಿ ಗ್ರಾಮ ಲೆಕ್ಕಿಗರು ಪರಿಶೀಲನೆ ಮಾಡಿಕೊಂಡು ನಂತರ ಪಿಂಚಣಿ ವ್ಯವಸ್ಥೆಯನ್ನು ಸುಗಮ ವ್ಯವಸ್ಥೆಯನ್ನು ಮಾಡುವಂತೆ ಸೂಚಿಸಲಾಗಿದೆ. ಈಗಾಗಲೇ 22,502 ಪಿಂಚಣಿದಾರರನ್ನು ಗುರುತಿಸಲಾಗಿದ್ದು, ಇನ್ನು ಕೂಡ ಬಾಕಿ ಉಳಿದಿರಬಹುದು. ಇದಕ್ಕಾಗಿ ವಿಶೇಷ ಪಿಂಚಣಿ ಅದಾಲತ್‌ಗಳನ್ನು ಮಾಡಲಾಗುತ್ತದೆ ಎಂದರು. ಕಂದಾಯ ಅದಾಲತ್ ಅಭಿಯಾನ ಮಾಡುವ ಕುರಿತು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಇದರಲ್ಲಿ ಜನಪ್ರತಿನಿಧಿಗಳು, ಎಲ್ಲ ಲಾನುಭವಿಗಳನ್ನು ಒಟ್ಟು ಸೇರಿಸುವ ಮೂಲಕ ಅವರ ಸಮ್ಮೇಳನ ನಡೆಸುವುದರ ಜತೆಯಲ್ಲಿ ಅವರ ಸಮಸ್ಯೆಗಳಿಗೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದರು.

ಪಿಆರ್ ಕಾರ್ಡ್ ಹೊಸ ಸೆಂಟರ್:
 ಪ್ರಾಪರ್ಟಿ ಕಾರ್ಡ್ ಕಡ್ಡಾಯವಾಗುತ್ತಿದ್ದಂತೆ ಈಗ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಈಗಾಗಲೇ ತಾಲೂಕು ಕಚೇರಿಯಲ್ಲಿ ಪಿಆರ್ ಕಾರ್ಡ್‌ಗೆ ರಶ್ ಜಾಸ್ತಿಯಾಗುತ್ತಿದೆ ಅದನ್ನು ತಪ್ಪಿಸಲು ಹೊಸ ಸೆಂಟರ್‌ವೊಂದನ್ನು ಆರಂಭಿಸುವ ಕುರಿತು ಚರ್ಚೆ ನಡೆಸಲಾಗಿದೆ. ವಾರದಲ್ಲಿ ಒಂದು ದಿನ ಜಿಲ್ಲಾಧಿಕಾರಿ ಅವರು ಮಧ್ಯಾಹ್ನ ನಂತರ ಇದಕ್ಕಾಗಿ ಮೀಸಲಿಟ್ಟು ಕುಂದುಕೊರತೆಗಳನ್ನು ಬಗಹರಿಸುವ ಭರವಸೆ ನೀಡಿದ್ದಾರೆ ಎಂದರು.

22 ಮಂದಿಗೆ 9 ಲಕ್ಷಕ್ಕೂ ಅಧಿಕ ಪರಿಹಾರ ನಿಧಿ ವಿತರಣೆ
ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ನಾನಾ ಕಾಯಿಲೆಯಿಂದ ಬಳಲುವ 22 ಅರ್ಜಿದಾರರಿಗೆ ರೂ .9,56,542 ಪರಿಹಾರಧನದ ಚೆಕ್‌ನ್ನು ಮಹಾನಗರ ಪಾಲಿಕೆ ಕಚೇರಿಯಲ್ಲಿ ವಿತರಣೆ ಮಾಡಲಾಯಿತು.

ಜೈಲುವಾಸದವರಿಗೆ ಗ್ರಾಮವಾಸ್ತವ್ಯ ಕಲ್ಪನೆ ಇಲ್ಲ:

 ಬಿಜೆಪಿಯವರು ಜೈಲುವಾಸ ಮಾಡಿ ಬಂದವರು. ಅವರಿಗೆ ಗ್ರಾಮ ವಾಸ್ತವ್ಯದ ಕಲ್ಪನೆ ಬರಲು ಸಾಧ್ಯವಿಲ್ಲ ಎನ್ನುವ ಮೂಲಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡುವುದರಿಂದ ಖರ್ಚು ಮಾತ್ರ ಲಾಭ ಏನೂ ಇಲ್ಲ ಎಂದು ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರ ಮಾತಿಗೆ ಎದಿರೇಟು ನೀಡಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News