ಭಟ್ಕಳ: 5512.630 ಲಕ್ಷ ರೂ. ಆಯವ್ಯಕ್ಕೆ ಅನುಮೋದನೆ

Update: 2019-06-26 16:42 GMT

ಭಟ್ಕಳ: ಮಂಗಳವಾರ ತಾ.ಪಂ. ಸಭಾಭವನದಲ್ಲಿ ತಾ.ಪಂ ಅಧ್ಯಕ್ಷ ಈಶ್ವರ ನಾಯ್ಕರ ಅಧ್ಯಕ್ಷತೆಯಲ್ಲಿ ಜರಗಿದ ಸಾಮಾನ್ಯ ಸಭೆಯಲ್ಲಿ 2019-20ನೇ ಸಾಲಿಗೆ 5512.630 ಲಕ್ಷ ರೂಪಾಯಿ ಆಯವ್ಯಯವನ್ನು ಮಂಡಿಸಿ ಅದಕ್ಕೆ ಅನುಮೋದನೆಯನ್ನು ಪಡೆಯಲಾಯಿತು.

ಸಾಮಾನ್ಯ ಸಭೆಯಲ್ಲಿ ಹಲವು ವಿಷಯಗಳು ಚರ್ಚೆಗೆ ಬಂದಿದ್ದು ಪ್ರಮುಖವಾಗಿ  ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕು ಮಲ್ಲಿಗೆ ಗೆ ಹೆಸರುವಾಸಿಯಾಗಿದ್ದು ಇಲ್ಲಿ ಗಣನೀಯ ಪ್ರಮಾಣದಲ್ಲಿ ಮಲ್ಲಿಗೆ ಬೆಳೆಯುವ ರೈತರಿದ್ದಾರೆ. ಆದರೆ ದಲ್ಲಾಳಿಗಳ ಹಾವಳಿಯಿಂದಾಗಿ ಮಲ್ಲಿಗೆ ಬೆಳೆದ ರೈತರು ಕನಿಷ್ಠ ಕೂಲಿ ದೊರೆಯದೆ ಕಂಗಾಲಾಗುತ್ತಿದ್ದಾರೆ. ಆದ್ದರಿಂದ ಮಲ್ಲಿಗೆಗೆ ಬೆಂಬಲ ಬೆಲೆಯನ್ನು ನೀಡುವುದರ ಮೂಲಕ ಸರ್ಕಾರ ರೈತರ ಬೆನ್ನೆಲುಬಾಗಿ ನಿಂತುಕೊಳ್ಳಬೇಕೆಂದು ಸಭೆಯಲ್ಲಿ ಸದಸ್ಯರು ಆಗ್ರಹಿಸಿದ್ದಾರೆ.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ವಿಷ್ಣು ದೇವಾಡಿಗ, ತಾಲೂಕಿನಲ್ಲಿ ಮಲ್ಲಿಗೆ ಬೆಳೆ ರೈತಸಮುದಾಯಕ್ಕೆ ಜೀವನಾಧರವಾಗಿದೆ. ಆದರೆ ಮಾರುಕಟ್ಟೆಯಲ್ಲಿನ ದರಕ್ಕೂ ಮಲ್ಲಿಗೆ ಕೃಷಿಕರಿಗೆ ಸಿಗುವ ಬೆಲೆಗೂ ಅಜಗಜಾಂತರ ವ್ಯತ್ಯಾಸವಿದ್ದು ಈ ಬೆಲೆಯ ತಾರತಮ್ಯವನ್ನಿ ನಿವಾರಿಸಿ ರೈತ ಕುಟುಂಬಕ್ಕೆ ನ್ಯಾಯಾ ಒದಗಿಸಿಕೊಡಬೇಕೆಂದು ಅವರು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸಂಧ್ಯಾ ಹೆಗಡೆ, ಮಲ್ಲಿಗೆ ಬೆಳೆಗಾರ ಸಂಘಟನೆಗಳ ಸಭೆಯನ್ನು ಕರೆದು ಈ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವುದಾಗಿ ಸಮಜಾಯಿಸಿ ನೀಡಿದರು. ಅಲ್ಲದೆ ಹಿರಿಯ ಅಧಿಕಾರಿಗಳೊಂದಿ ಚರ್ಚಿಸಿ ಮಲ್ಲಿಗೆ ಬೆಳೆಗೆ ನೇರ ಮಾರುಕಟ್ಟೆ ಒದಗಿಸುವ ಯೋಜನೆಯನ್ನು ರೂಪಿಸಲಾಗುವುದು ಎಂದು ತಿಳಿಸಿದರು.

ತಾಲೂಕಿನಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ಕುರಿತಂತೆ ಪಶುವೈದ್ಯಾಧಿಕಾರಿ ಡಾ. ವಿವೇಕಾನಂದ ಹೆಗಡೆ ಮಾಹಿತಿ ನೀಡಿ, ಭಟ್ಕಳ ನಗರ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಮನುಷ್ಯರ ಮೇಲೆ ನಾಯಿ ದಾಳಿ ನಡೆಯುತ್ತಿದೆ. ಇದಕ್ಕೆ ಹಲವು ಕಾರಣಗಳಿದ್ದು ಯಾವುದೇ ಕಾರಣಕ್ಕೂ ಆಹಾರವನ್ನು ಪ್ಲಾಸ್ಟಿಕ್ ಪೊಣ್ಣದಲ್ಲಿಟ್ಟು ರಸ್ತೆ ಬದಿ ಎಸೆಯಬೇಡಿ ಇದರಿಂದಾಗಿ ಬೀದಿ ಬದಿ ನಾಯಿ ಕಾಟ ಹೆಚ್ಚಾಗಿ ಅದು ಮನುಷ್ಯರ ಮೇಲೆ ಎರಗಲು ಕಾರಣವಾಗುತ್ತದೆ ಎಂದು ತಿಳಿಸಿದರು.

ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಕೃಷಿ ಸಹಾಯಕ ನಿರ್ದೇಶಕ ಮಧುಕರ್ ನಾಯ್ಕ, ಕಳೆದ ಸಲಕ್ಕಿಂತ ಈ ಬಾರಿ ಶೇ.35% ರಷ್ಟು ಮಳೆ ಕಡಿಮೆಯಾಗಿದ್ದು ಕೃಷಿ ಚಟುವಟಿಕೆಗಳಿಗೆ ಹಿನ್ನೆಡೆಯಾಗಿದೆ. ಈಗ ಮಳೆ ಕೊರತೆ ನೀಗುವ ಸಂಭವವಿದ್ದು ಮುಂದಿನ ಒಂದೆರಡು ದಿನಗಳಲ್ಲಿ ಕೃಷಿ ಚಟುವಟಿಕೆಗಳೂ ಆರಂಭವಾಗುವ ನಿರೀಕ್ಷೆಯಿದೆ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಾರೂಕೇರಿಗೆ ಸ್ಥಳಾಂತರಿಸುವುದು ಹಾಗೂ ಶಿರಾಲಿ, ಬೇಂಗ್ರೆ ಭಾಗಕ್ಕೆ ಕಡವಿನಕಟ್ಟೆ ಹೊಳೆಯಿಂದ ನೀರನ್ನು ಪೂರೈಸುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

ಸಭೆಯಲ್ಲಿ ತಾ.ಪಂ ಉಪಾಧ್ಯಕ್ಷೆ ರಾಧಾ ಅಶೋಕ ವೈದ್ಯ, ಸ್ಥಾಯಿ ಸಮಿತಿಯ ಅಧ್ಯಕ್ಷ ಮಿನಾಕ್ಷಿ ನಾಯ್ಕ, ತಾ.ಪಂ ಕಾರ್ಯನಿರ್ವಾಣಾಧಿಕಾರಿ ಪ್ರಭಾಕರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News