ಸರಕಾರ ಬಡವರಿಗಾಗಿ 94ಸಿ, 94ಸಿಸಿ ಯೋಜನೆ ಜಾರಿಗೆ ತಂದಿದ್ದು ಪ್ರಯೋಜನವಾಗಿದೆ: ದ.ಕ ಜಿಲ್ಲಾಧಿಕಾರಿ

Update: 2019-06-26 16:49 GMT

ಬೆಳ್ತಂಗಡಿ : ಸರಕಾರವು ಬಡವರಿಗಾಗಿ 94ಸಿ ಮತ್ತು 94ಸಿಸಿ ಯೋಜನೆಯನ್ನು ಜಾರಿಗೆ ತಂದಿದ್ದು ಅದರಿಂದ ಬಡವರಿಗೆ ತುಂಬಾ ಪ್ರಯೋಜನವಾಗಿದೆ. ಇದರಲ್ಲಿ ಯಾವುದೇ ರಾಜಕಾರಣಿಗಳ ಅಧವಾ ಇನ್ಯಾವುದೇ ಒತ್ತಡಕ್ಕೆ ಮಣಿದು ಶ್ರೀಮಂತರು ಯೋಜನೆಯಲ್ಲಿ ಜಮೀನು ಪಡೆದುಕೊಂಡಿದ್ದರೆ ಅಂತವರ ವಿರುದ್ದ ಹಾಗೂ ಅದಕ್ಕೆ ಸಹಕರಿಸಿದ  ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸಿಂಥಿಲ್ ಹೇಳಿದರು.

ಅವರು ಬುಧವಾರ ಬೆಳ್ತಂಗಡಿ ಮಿನಿ ವಿಧಾನಸೌಧದಲ್ಲಿ ಕಂದಾಯಾಧಿಕಾರಿಗಳ ಪ್ರಗತಿಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಕೆಲವೊಂದು ಸಂದರ್ಭದಲ್ಲಿ ಬಡವರಿಗೆ ಸಹಕಾರಿಯಾಗಲೆಂದು ಸಣ್ಣಪುಟ್ಟ ಬದಲಾವಣೆಗಳಾಗಿದ್ದರೆ ಅದನ್ನು ಕ್ಷಮಿಸಬಹುದು ಆದರೆ ಉದ್ದೇಶಪೂರ್ವಕವಾಗಿ ಶ್ರೀಮಂತರಿಗೆ ಅಕ್ರಮವಾಗಿ ನೀಡಿದ್ದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು. 

ಬೆಳ್ತಂಗಡಿಯಲ್ಲಿ ಇಂತಹ ಅಕ್ರಮದ ಬಗ್ಗೆ ದೂರುಗಳು ಬಂದಿದ್ದು ಅದನ್ನು ಪರಿಶೀಲಿಸಲಾಗುತ್ತಿದೆ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದರು.  ತಾಲೂಕಿನಲ್ಲಿ ಸುಮಾರು 14 ಸಾವಿರ ಮಂದಿಗೆ 94 ಸಿ ಯಲ್ಲಿ ಜಮೀನು ಮಂಜೂರಾಗಿದ್ದು ಇದರಲ್ಲಿ ಯಾವುದೇ ಅಕ್ರಮವಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಸುಮಾರು 14 ಸಾವಿರ ಅರ್ಜಿಗಳು ತಿರಸ್ಕಾರಗೊಂಡಿದ್ದು ಅದರಲ್ಲಿ ಯಾರಾದರೂ ಅರ್ಹರಿದ್ದರೆ ಅವರು ಪುನರ್ಪರಿಶೀಲನೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ರಾಜ್ಯದಲ್ಲೇ ಕಂದಾಯ ವ್ಯವಸ್ಥೆಯಲ್ಲಿ ಜಿಲ್ಲೆ ಪ್ರಥಮ

ಕಂದಾಯ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದು ಅನುಭವಿ ಅಧಿಕಾರಿಗಳ ತಂಡ ಜಿಲ್ಲೆಯಲ್ಲಿದೆ. ಆದರಿಂದ ಅತೀ ವೇಗವಾಗಿ ಕಂದಾಯ ಇಲಾಖೆಯ ಸಮಸ್ಯೆಗಳು ಪರಿಹಾರವಾಗುತ್ತಿದೆ. ಜಿಲ್ಲೆಯಲ್ಲಿ ಸುಮಾರು 1ಲಕ್ಷಕ್ಕಿಂತಲೂ ಅಧಿಕ ಅರ್ಜಿಗಳು 94 ಸಿ, 94ಸಿಸಿಯಲ್ಲಿ ಬಂದಿದ್ದು ಸುಮಾರು 50ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಇದು ಕೇವಲ 6ರಿಂದ 8ತಿಂಗಳ ಅವಧಿಯಲ್ಲಿ ಪ್ರಕ್ರಿಯೆಗಳು ಮುಗಿದಿದ್ದು ಉಳಿದ ಅರ್ಜಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ಕಂದಾಯ ಇಲಾಖೆಯಲ್ಲಿ ಕೆಲವೊಂದು ಹಳೆಯ ಜಮೀನು ಸಮಸ್ಯೆಗಳಿದ್ದು ಅದನ್ನು ಪರಿಹರಿಸುವುದಕ್ಕೆ ಆಧ್ಯತೆಯನ್ನು ನೀಡಲಾಗುತ್ತಿದೆ, ಒಂದೇ ಸರ್ವೆ ನಂಬರ್‍ನಲ್ಲಿ ಸಾವಿರಾರು ಎಕ್ರೆ ಜಮೀನಿದ್ದು ಅದು ಅರಣ್ಯ ಹಾಗೂ ಕಂದಾಯ ಇಲಾಖೆಯ ನಡುವೆ ಹಂಚಿ ಗೋಗಿದ್ದು ಯಾವುದು ಅರಣ್ಯ ಯಾವುದು ಕಂದಾಯ ಎಂಬುದು ಗೊತ್ತಾಗದೆ ಆಗುತ್ತಿರುವ ಸಮಸ್ಯೆಗಳಿಗೂ ಪರಿಹಾರ ಕಾಣುವ ಪ್ರಯತ್ನ ನಡೆಯುತ್ತಿದೆ ಎಂದರು.

ಸರಕಾರದಲ್ಲಿಯೂ ಅಗತ್ಯಕ್ಕೆ ಜಾಗದ ಕೊರತೆಯಿದ್ದು ಇದನ್ನು ಪರಿಗಣಿಸಿ ಬಡವರ ಅಗತ್ಯತೆಯನ್ನು ಪರಿಗಣಿಸಿ ಸಮತೋಲನೆ ಮಾಡಲಾಗುತ್ತಿದೆ ಎಂದರು. ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಅತ್ಯುತ್ತಮವಾದ ಕೆಲಸವಾಗುತ್ತಿದ್ದು ಇಲ್ಲಿನ ಬಹುತೇಕ ಸಮಸ್ಯೆಗಳು ಪರಿಹಾರವಾಗಿದೆ. ಇನ್ನೂ ಹಳೆಯ ಕೆಲವು ಸಮಸ್ಯೆಗಳಿದ್ದು ಅದನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಬಾಂಜಾರುಮಲೆ ನಿವಾಸಿಗಳಿಗೆ ಅನ್ಯಾಯವಾಗದಂತೆ ಕ್ರಮ

ಬಾಂಜಾರುಮಲೆ ನಿವಾಸಿಗಳಿಗೆ ವಿದ್ಯುತ್ ಸಂಪರ್ಕ ಲಭಿಸಿದೆ ಆದರೆ ಜಾಗದ ದಾಖಲೆಯಲ್ಲಿ ಗೊಂದಲ ಉಂಟಾಗಿ ಸರಕಾರಿ ಸೌಲಭ್ಯ, ಬ್ಯಾಂಕ್ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಇದು ಹಲವಾರ ವರ್ಷಗಳ ಹಿಂದಿನ ಸರಕಾರ ಮತ್ತು ಖಾಸಗಿ ಜಮೀನುದಾರರ ನಡುವೆ ನ್ಯಾಯಾಲಯದಲ್ಲಿ ನಡೆದ ವಿವಾದಗಳು. ಇದರಲ್ಲಿ ಬಡ ಆದಿವಾಸಿಗಳು ಸಮಸ್ಯೆ ಎದುರಿಸುವುದನ್ನು ತಪ್ಪಿಸಲು ಜಿಲ್ಲಾಡಳಿತ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಿದೆ. ಬಾಂಜಾರು ಮಲೆಗೆ ಭೇಟಿ ನೀಡಿ ಅಲ್ಲಿನ ವಾಸ್ತವಿಕತೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಂಡೋ ಸಂತ್ರಸ್ಥರ ಪುನರ್ವಸತಿ ಕೇಂದ್ರದ ಟೆಂಡರ್  ಬಗ್ಗೆ ಇರುವ ಗೊಂದಲಗಳನ್ನು ಪರಿಹರಿಸಲಾಗಿದ್ದು ಇದೀಗ ವಹಿಸಿಕೊಂಡಿರುವ ಸಿಯೋನ್ ಆಶ್ರಮದವರು ಇದನ್ನು ನಡೆಸಲಿದ್ದಾರೆ ಈ ಬಗ್ಗೆ ತಹಶೀಲ್ದಾರ್ ಅವರು ಸಂತ್ರಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದರು. 

ತಹಶೀಲ್ದಾರ್ ಗಣಪತಿ ಶಾಸ್ತ್ರಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News