ಬಿಜೆಪಿ ಗೆಲುವನ್ನು ಪ್ರಶ್ನಿಸುವ ಮೂಲಕ ಕಾಂಗ್ರೆಸ್‌ನಿಂದ ಮತದಾರರಿಗೆ ಅವಮಾನ: ಪ್ರಧಾನಿ

Update: 2019-06-26 17:01 GMT

ಹೊಸದಿಲ್ಲಿ, ಜೂ.26: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವು ಮತ್ತು ಇವಿಎಂಗಳ ಕಾರ್ಯಕ್ಷಮತೆ ಬಗ್ಗೆ ಅನುಮಾನ ವ್ಯಕ್ತಪಡಿಸುವ ಮೂಲಕ ಕಾಂಗ್ರೆಸ್ ಮತದಾರರನ್ನು ಅವಮಾನಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸಭೆಯಲ್ಲಿ ಆರೋಪಿಸಿದ್ದಾರೆ.

ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಸೂಚಿಸುವ ಸದರ್ಭದಲ್ಲಿ ಮಾತನಾಡಿದ ಮೋದಿ, ವಿರೋಧ ಪಕ್ಷಗಳ ಅಹಂಕಾರಕ್ಕೂ ಒಂದು ಮಿತಿಯಿರಬೇಕು. ಚುನಾವಣೆಯ ಫಲಿತಾಂಶವನ್ನು ಪ್ರಶ್ನಿಸುವ ಮೂಲಕ ಅವರು ಮತದಾರರತ್ತ ಬೆರಳು ತೋರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್‌ಗೊಂದು ಸಮಸ್ಯೆಯಿದೆ, ಅದಕ್ಕೆ ಸೋಲನ್ನು ಒಪ್ಪಿಕೊಳ್ಳಲು ಮತ್ತು ಗೆಲುವನ್ನು ಅರಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಪ್ರಧಾನಿ ಕುಹಕವಾಡಿದ್ದಾರೆ.

 ಅಷ್ಟೊಂದು ದೊಡ್ಡ ಜನಾದೇಶದ ನಂತರ, ಬಿಜೆಪಿ ಗೆದ್ದಿದೆ, ಆದರೆ ದೇಶ ಸೋತಿದೆ ಎಂದು ನೀವು ಹೇಳುತ್ತೀರಿ. ಕಾಂಗ್ರೆಸ್ ಸೋತರೆ ದೇಶ ಸೋತಂತೆಯೇ?, ಕಾಂಗ್ರೆಸ್ ಎಂದರೆ ದೇಶ ಎಂದರ್ಥವೇ ಮತ್ತು ದೇಶ ಎಂದರೆ ಕಾಂಗ್ರೆಸ್ ಎಂದರ್ಥವೇ?, ಅಹಂಕಾರಕ್ಕೂ ಒಂದು ಮಿತಿ ಬೇಡವೇ ಎಂದು ಪ್ರಧಾನಿ ಕಿಡಿಕಾರಿದ್ದಾರೆ. ಕಾಂಗ್ರೆಸ್ ಸೋತರೆ ಭಾರತ ಸೋತಂತೆ ಎಂದು ಕಾಂಗ್ರೆಸ್‌ನಲ್ಲಿರುವ ನಮ್ಮ ಗೆಳೆಯರು ಭಾವಿಸುತ್ತಾರೆಯೇ?, ಭಾರತ ಮತ್ತು ಕಾಂಗ್ರೆಸ್ ಒಂದೆಯೇ? ಖಂಡಿತವಾಗಿಯೂ ಅಲ್ಲ. ನಮ್ಮ ಚುನಾವಣಾ ಪ್ರಕ್ರಿಯೆ ಮತ್ತು ಪ್ರಜಾಪ್ರಭುತ್ವವನ್ನು ಗೌರವಿಸುವುದು ಬಹಳ ಮುಖ್ಯ ಎಂದು ಮೋದಿ ತಿಳಿಸಿದ್ದಾರೆ.

 ದೇಶದಲ್ಲಿ ಇವಿಎಂ ಬಳಸಿ ಅನೇಕ ಚುನಾವಣೆಗಳು ನಡೆದಿವೆ ಮತ್ತು ಎಲ್ಲ ಪಕ್ಷಗಳಿಗೂ ಒಂದಿಲ್ಲ ಒಂದು ರಾಜ್ಯದಲ್ಲಿ ಆಳ್ವಿಕೆ ನಡೆಸುವ ಅವಕಾಶ ಸಿಕ್ಕಿದೆ. ಆಗೆಲ್ಲ ಇಲ್ಲದ ಇವಿಎಂ ಮೇಲಿನ ಅನುಮಾನ ಈಗ ಯಾಕಿದೆ ಎಂದು ಅವರು ಪ್ರಶ್ನಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News