ರವಿಶಂಕರ್ ಪ್ರಸಾದ್ ‘ಉಚಿತ ಸೇವೆ’ ಹೇಳಿಕೆಗೆ ಬಿಜೆಪಿ ಸಂಸದನಿಂದಲೇ ವಿರೋಧ

Update: 2019-06-26 17:28 GMT

ಹೊಸದಿಲ್ಲಿ,ಜೂ.26: ಪ್ರಾಕೃತಿಕ ವಿಕೋಪದ ಸಂದರ್ಭಗಳಲ್ಲಿ ಸರಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಗಳು ಮಾತ್ರವೇ ಚಂದಾದಾರರಿಗೆ ಉಚಿತ ಸೇವೆಗಳನ್ನು ಒದಗಿಸುತ್ತವೆ ಎಂಬ ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಅವರ ಹೇಳಿಕೆಗೆ ಬುಧವಾರ ಲೋಕಸಭೆಯಲ್ಲಿ ಬಿಜೆಪಿಯ ಸಂಸದರೊಬ್ಬರಿಂದಲೇ ಪ್ರಬಲ ವಿರೋಧ ವ್ಯಕ್ತವಾಗಿದೆ.

  ಪ್ರಶ್ನೋತ್ತರ ವೇಳೆಯಲ್ಲಿ ಪೂರಕ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ರವಿಶಂಕರ್ ಪ್ರಸಾದ್ ನೆರೆ ಹಾಗೂ ಚಂಡಮಾರುತಗಳಂತಹ ಪ್ರಾಕೃತಿಕ ವಿಕೋಪಗಳ ಸಂದರ್ಭಗಳಲ್ಲಿ ಸರಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಗಳಾದ ಬಿಎಸ್ಸೆನ್ನಲ್ ಹಾಗೂ ಎಂಟಿಎನ್‌ಎಲ್‌ಗಳು ಮಾತ್ರವೇ ಚಂದಾದಾರರಿಗೆ ಉಚಿತ ಚಂದಾ ಸೇವೆಗಳನ್ನು ಒದಗಿಸುತ್ತವೆ ಎಂದರು.

   ಪ್ರಸಾದ್ ಅವರ ಹೇಳಿಕೆಯನ್ನು ವಿರೋಧಿಸಿದ ಬಿಜೆಪಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಢಿ ಅವರು ಖಾಸಗಿ ಟೆಲಿಕಾಂ ಸಂಸ್ಥೆಗಳು ಕೂಡಾ ಪ್ರಾಕೃತಿಕ ವಿಕೋಪಗಳ ಸಂದರ್ಭಗಳಲ್ಲಿ ಉಚಿತ ಸೇವೆಗಳನ್ನು ಒದಗಿಸುತ್ತವೆ ಎಂದರು.ಆಗ ಸ್ಪಷ್ಟನೆ ನೀಡಿದ ರವಿಶಂಕರ್ ಅವರು ಖಾಸಗಿ ಕಂಪೆನಿಗಳು ಒಂದೆರಡು ದಿನಗಳವರೆಗೆ ಮಾತ್ರವೇ ಉಚಿತ ಸೇವೆಯನ್ನು ನೀಡಿದರೆ, ಬಿಎಸ್ಸೆನ್ನಲ್ ಹಾಗೂ ಎಂಟಿಎನ್‌ಎಲ್ ವಿಕೋಪವು ಕೊನೆಗೊಳ್ಳುವ ತನಕವೂ ಉಚಿತ ಸೇವೆಯನ್ನು ನೀಡುತ್ತಿರುತ್ತದೆ ಎಂದರು.

ಬಿಎಸ್ಸೆನ್ನಲ್ ಹಾಗೂ ಎಂಟಿಎನ್‌ಎಲ್‌ಗಳಲ್ಲಿ ಆಗಾಗ್ಗೆ ಕಾಲ್ಸ್‌ಡ್ರಾಪ್ (ಕರೆ ಮಾಡುವಾಗ ಸಂಪರ್ಕ ಕಡಿದುಹೋಗುವುದು) ಸಮಸ್ಯೆಗಳಾಗುತ್ತಿದ್ದರೂ, ಅವುಗಳಿಗೂ ಶುಲ್ಕ ವಿಧಿಸಲಾಗುತ್ತಿದೆಯೆಂದು ರೂಢಿ ಅಸಮಾಧಾನ ವ್ಯಕ್ತಪಡಿಸಿದರು. ಈ ಟೆಲಿಕಾಂ ಸಂಸ್ಥೆಗಳು ಸರಕಾರಿ ಸ್ವಾಮ್ಯದ್ದಾಗಿರುವುದರಿಂದ, ತಮಗೆ ನೆಟ್‌ವರ್ಕ್ ದೊರೆಯದಿದ್ದಲ್ಲಿ ಅದಕ್ಕಾಗಿ ಅವರು ಸರಕಾರವನ್ನು ದೂಷಿಸುತ್ತಾರೆ ಎಂದರು.

  ಟೆಲಿಕಾಂಗಳ ಸೇವಾನಿರ್ವಹಣೆಯನ್ನು ಸುಧಾರಿಸಲು ರಾಜೀವ್ ರೂಢಿ ಅವರನ್ನು ಸಚಿವರನ್ನಾಗಿ ನೇಮಿಸಬೇಕೆಂದು ಕೆಲವು ಪ್ರತಿಪಕ್ಷ ಸದಸ್ಯರು ಸಲಹೆ ನೀಡಿದರು. ಮುಂದುವರಿದು ಮಾತನಾಡಿದ ರವಿಶಂಕರ್ ಪ್ರಸಾದ್ ಅವರು ಸರಕಾರಿ ಸ್ವಾಮ್ಯದ ಟೆಲಿಕಾಂ ಜಾಲಗಳ ಕಾರ್ಯನಿರ್ವಹಣೆ ಉತ್ತಮವಾಗಿರಲು, ಅವುಗಳ ಆರ್ಥಿಕ ಸ್ಥಿತಿಯೂ ಚೆನ್ನಾಗಿರಬೇಕಾದುದು ಅತ್ಯಗತ್ಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News