ಎಲ್ಲರ ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸುವ: ಭಾರತದಲ್ಲಿ ಪಾಂಪಿಯೋ

Update: 2019-06-27 13:04 GMT

ಹೊಸದಿಲ್ಲಿ, ಜೂ.26: ಅಮೆರಿಕ ಮತ್ತು ಭಾರತ ಧಾರ್ಮಿಕ ಸ್ವಾತಂತ್ರ್ಯದ ಪರವಾಗಿ ನಿಲ್ಲಬೇಕು ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಬುಧವಾರ ತಿಳಿಸಿದ್ದಾರೆ. ಎರಡು ದಿನಗಳ ಭಾರತ ಭೇಟಿಯಲ್ಲಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿಯ ಈ ಹೇಳಿಕೆ ಇತ್ತೀಚೆಗೆ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕುರಿತು ಅಮೆರಿಕ ಬಿಡುಗಡೆ ಮಾಡಿರುವ ವರದಿಯ ಹಿನ್ನೆಲೆಯಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ.

ಭಾರತ ಅಂತರ್‌ರಾಷ್ಟ್ರೀಯ ಕೇಂದ್ರದಲ್ಲಿ ಪಾಂಪಿಯೊ ಮಾಡಿದ ಭಾಷಣದಲ್ಲಿ, ಭಾರತ ಜಗತ್ತಿನ ನಾಲ್ಕು ಪ್ರಮುಖ ಧರ್ಮಗಳ ಉಗಮಸ್ಥಾನವಾಗಿದೆ. ನಾವೆಲ್ಲರೂ ಎದ್ದುನಿಂತು ಎಲ್ಲರ ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸೋಣ. ಈ ಹಕ್ಕುಗಳ ಪರವಾಗಿ ಎಲ್ಲರೂ ಜೊತೆಯಾಗಿ ಒಗ್ಗಟ್ಟಿನಿಂದ ಮಾತನಾಡೋಣ. ನಾವು ಯಾವಾಗ ಈ ಹಕ್ಕುಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆಯೋ ಆಗ ಜಗತ್ತು ಕೆಟ್ಟದಾಗುತ್ತದೆ ಎಂದು ಎಚ್ಚರಿಸಿದ್ದಾರೆ.

 ಅಂತರ್‌ರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿ 2018 ಅಮೆರಿಕದ ವಿದೇಶಾಂಗ ಇಲಾಖೆಯ ಜಾಲತಾಣದಲ್ಲಿ ಲಭ್ಯವಿದ್ದು, ಗೋರಕ್ಷಕರಿಂದ ನಡೆದ ದಾಳಿಗಳಲ್ಲಿ ಅಪರಾಧಿಗಳನ್ನು ಶಿಕ್ಷೆಗೊಳಪಡಿಸುವಲ್ಲಿ ಆಡಳಿತವರ್ಗ ವಿಫಲವಾಗಿದೆ ಎಂದು ಆರೋಪಿಸಲಾಗಿದೆ. ನಮ್ಮ ದೇಶದ ಪ್ರಜೆಗಳ ಸಾಂವಿಧಾನಿಕವಾಗಿ ರಕ್ಷಿಸಲ್ಪಟ್ಟ ಹಕ್ಕುಗಳ ಸ್ಥಿತಿಗತಿಯ ಬಗ್ಗೆ ವಿದೇಶಿ ಸಂಸ್ಥೆ ಅಥವಾ ಸರಕಾರ ನೀಡುವ ಹೇಳಿಕೆ ವಿಶ್ವಸನೀಯವಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ ರವಿವಾರ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News