ರಾಷ್ಟ್ರೀಯ ನಾಗರಿಕರ ಪಟ್ಟಿಯಲ್ಲಿ ಹೆಸರಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಬಾಲಕಿ

Update: 2019-06-27 08:11 GMT

ಗುವಾಹತಿ, ಜೂ.27: ಅಸ್ಸಾಂ ರಾಜ್ಯದ ದರ್ರಂಗ್ ಜಿಲ್ಲೆಯ ರೌಮರಿ ಚಪೋರಿ ಎಂಬ ಗ್ರಾಮದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು   ನೇಣು ಬಿಗಿದುಕೊಂಡು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬುಧವಾರ ಪ್ರಕಟಗೊಂಡ ಎನ್‌ಆರ್‌ಸಿಯಿಂದ ಕೈಬಿಡಲಾದವರ ಹೆಚ್ಚುವರಿ ಕರಡು ಪಟ್ಟಿಯನ್ನೇ ಅಂತಿಮ ಪಟ್ಟಿಯೆಂದು ತಪ್ಪಾಗಿ ತಿಳಿದು ಅದರಲ್ಲಿ ತನ್ನ ಹೆಸರಿಲ್ಲದೇ ಇರುವುದನ್ನು ಅರಿತು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆಕೆಯ ಸಂಬಂಧಿಕರು ಹಾಗೂ ವಿದ್ಯಾರ್ಥಿ ಸಂಘಟನೆಯೊಂದು ದೂರಿದೆ.

ಮೃತ ಬಾಲಕಿಯನ್ನು ನೂರ್ ನಹಾರ್ ಬೇಗಂ ಎಂದು ಗುರುತಿಸಲಾಗಿದೆ.

ಕಳೆದ ವರ್ಷ ಪ್ರಕಟವಾದ ಕರಡು ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ನಲ್ಲಿ ತನ್ನ ಹೆಸರಿಲ್ಲದೇ ಇದ್ದರೂ ಅಂತಿಮ ಪಟ್ಟಿಯಲ್ಲಿ ತನ್ನ ಹೆಸರಿರುವುದೆಂದು ಆಕೆ ನಂಬಿದ್ದಳು. ಆದರೆ ಬುಧವಾರ ಪ್ರಕಟವಾದ ಕೈಬಿಡಲಾದವರ ಹೆಸರುಗಳ ಹೆಚ್ಚುವರಿ ಪಟ್ಟಿಯನ್ನೇ ಅಂತಿಮ ಪಟ್ಟಿಯೆಂದು ನಂಬಿದ ಆಕೆಯ ತಂದೆ ಎನ್‌ಆರ್‌ಸಿ ಕೇಂದ್ರಕ್ಕೆ ತೆರಳಿ ಪಟ್ಟಿಯಲ್ಲಿ ಆಕೆಯ ಹೆಸರಿಲ್ಲದೇ ಇರುವುದನ್ನು ಕಂಡು ದೂರವಾಣಿ ಕರೆ ಮಾಡಿ ತಿಳಿಸಿದ್ದರು. ಇದರ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಬುಧವಾರ ಪ್ರಕಟಗೊಂಡ ಪಟ್ಟಿಯಲ್ಲಿ ಆಕೆಯ ಹೆಸರಿರದೇ ಇರುವುದರಿಂದ ಅಂತಿಮ ಪಟ್ಟಿಯಲ್ಲಿ ಆಕೆಯ ಹೆಸರು ಸೇರ್ಪಡೆಗೊಳ್ಳುವ ಹೆಚ್ಚಿನ ಸಾಧ್ಯತೆಯಿತ್ತೆಂದು ಆಕೆಯ ಕುಟುಂಬಕ್ಕೆ ತಿಳಿದಿರಲಿಲ್ಲ. ಆಕೆಯ ಸಾವಿಗೆ ರಾಜ್ಯ ಸರಕಾರ ಕಾರಣ ಎಂದು ಆಕೆಯ ಮನೆಗೆ ಭೇಟ ನೀಡಿದ ಆಲ್ ಅಸ್ಸಾಂ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಯೂನಿಯನ್ ನಾಯಕ ಅಬ್ದುಲ ಹೈ ಆರೋಪಿಸಿದ್ದಾರೆ.

ಬಾಲಕಿ ಎನ್‌ಆರ್‌ಸಿ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂಬುದಕ್ಕೆ ಯಾವುದೇ ಆಧಾರವಿಲ್ಲ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ದರ್ರಂಗ್ ಎಸ್ಪಿ ಅಮೃತ್ ಭುಯನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News