ಉಗ್ರರ ದಾಳಿಗೆ ಬಲಿಯಾದ ಹುತಾತ್ಮ ಅಧಿಕಾರಿ ಅರ್ಷದ್ ಖಾನ್ ಮನೆಗೆ ಅಮಿತ್ ಶಾ ಭೇಟಿ

Update: 2019-06-27 08:59 GMT

ಶ್ರೀನಗರ, ಜೂ.27: ಕೇಂದ್ರ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ತಮ್ಮ ಮೊದಲ  ಭೇಟಿ ನೀಡಿರುವ ಅಮಿತ್ ಶಾ ಜೂನ್ 12ರಂದು ಅನಂತ್ ನಾಗ್ ಉಗ್ರ ದಾಳಿಯ ವೇಳೆ ಹುತಾತ್ಮರಾದ ಶ್ರೀನಗರದ ಪೊಲೀಸ್ ಅಧಿಕಾರಿ ಅರ್ಷದ್ ಅಹ್ಮದ್ ಖಾನ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಈ ಸಂದರ್ಭ ಅವರು ಅರ್ಷದ್ ರ ಐದು ವರ್ಷದ ಪುತ್ರ ಉಬಾನ್ ಖಾನ್ ಹಾಗೂ ಇತರ ಕುಟುಂಬ ಸದಸ್ಯರನ್ನು ಮಾತನಾಡಿಸಿ ಸಾಂತ್ವನ ಹೇಳಿದ್ದಾರೆ. 

ಅರ್ಷದ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಚ ಅರ್ಪಿಸುವ ಸಮಾರಂಭದಲ್ಲಿ ಅವರ ಪುತ್ರನನ್ನು ಎತ್ತಿಕೊಂಡಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕಣ್ಣೀರು ಸುರಿಸಿದ್ದ ಫೋಟೊ ವೈರಲ್ ಆಗಿತ್ತು.

“ದೇಶದ ಸುರಕ್ಷತೆಗೆ ಅವರ ತ್ಯಾಗ ಹಲವಾರು ಜೀವಗಳನ್ನು ಉಳಿಸಿದೆ. ಇಡೀ ದೇಶ ಅರ್ಷದ್ ಖಾನ್ ಅವರ ಶೌರ್ಯ ಸಾಹಸದ ಬಗ್ಗೆ ಹೆಮ್ಮೆ ಹೊಂದಿದೆ'' ಎಂದು ಅವರ ಕುಟುಂಬದ ಜತೆ ತಮ್ಮ ಭೇಟಿಯ ಚಿತ್ರಗಳನ್ನು ಪೋಸ್ಟ್ ಮಾಡಿ ಶಾ ಟ್ವೀಟ್ ಮಾಡಿದ್ದಾರೆ.

ಉಗ್ರರು ಜೂನ್ 12ರಂದು ಸಿಆರ್‍ಪಿಎಫ್ ಗಸ್ತು ತಂಡದ ಮೇಲೆ ಗುಂಡಿನ ದಾಳಿ ನಡೆಸಿದಾಗ ಮೂವತ್ತೇಳು ವರ್ಷದ ಅರ್ಷದ್ ಖಾನ್ ಗಾಯಗೊಂಡಿದ್ದರು. ಈ ಸಂದರ್ಭ ಗ್ರೆನೇಡ್ ದಾಳಿಯೂ ನಡೆದಿದ್ದು ಐದು ಸಿಆರ್‍ಪಿಎಫ್ ಯೋಧರು ಬಲಿಯಾಗಿದ್ದರು.

ಅರ್ಷದ್ ಖಾನ್ ಅವರು ತಮ್ಮ ಅಧಿಕೃತ ಗುಂಡು ನಿರೋಧಕ ವಾಹನದಿಂದ ತಮ್ಮ ಸರ್ವಿಸ್ ರೈಫಲ್ ಹಿಡಿದು ಕೆಳಗಿಳಿಯುತ್ತಿದ್ದಂತೆಯೇ ಉಗ್ರರು ಗುಂಡಿನ ಮಳೆಗರೆದಿದ್ದರು. ಈ ಸಂದರ್ಭ ತೀವ್ರ ಗಾಯಗೊಂಡಿದ್ದರೂ ಅರ್ಷದ್ ಅವರು ಉಗ್ರ ಕುಸಿದು ಬೀಳುವ ತನಕ ಗುಂಡು ಹಾರಿಸಿದ್ದರು. ಅರ್ಷದ್ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವೈದ್ಯರಿಗೆ ಅವರ ಪ್ರಾಣವನ್ನು ಉಳಿಸುವುದು ಸಾಧ್ಯವಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News