ಕ್ರಿಕೆಟ್ ಬ್ಯಾಟ್‌ನಿಂದ ಅಧಿಕಾರಿಗೆ ಥಳಿಸಿದ ಬಿಜೆಪಿ ನಾಯಕ ಕೈಲಾಶ್ ಪುತ್ರನಿಗೆ ಜಾಮೀನು ನಿರಾಕರಣೆ

Update: 2019-06-27 09:21 GMT

 ಇಂದೋರ್, ಜೂ.27: ನಗರ ಪಾಲಿಕೆಯ ಅಧಿಕಾರಿಯೊಬ್ಬರಿಗೆ ಕ್ರಿಕೆಟ್ ಬ್ಯಾಟ್‌ನಿಂದ ಥಳಿಸಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಮಧ್ಯಪ್ರದೇಶ ಬಿಜೆಪಿಯ ಹಿರಿಯ ನಾಯಕ ಕೈಲಾಶ್ ವಿಜಯವರ್ಗೀಯ ಪುತ್ರ, ಶಾಸಕ ಆಕಾಶ್ ವಿಜಯವರ್ಗೀಯಗೆ ನ್ಯಾಯಾಲಯ ಗುರುವಾರ ಜಾಮೀನು ನೀಡಲು ನಿರಾಕರಿಸಿದೆ.

 ಹೀಗಾಗಿ ಮೊದಲ ಬಾರಿ ಇಂದೋರ್-3 ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾಗಿರುವ ಆಕಾಶ್ ವಿಜಯವರ್ಗಿಯ ಜು.7ರ ತನಕ ಜೈಲಿನಲ್ಲಿ ಕಾಲ ಕಳೆಯಬೇಕಾಗಿದೆ.

ಶಾಸಕ ಆಕಾಶ್ ತನ್ನ ಬೆಂಬಲಿಗರ ಪಡೆಯೊಂದಿಗೆ ಅಕ್ರಮ ಕಟ್ಟಡ ಧ್ವಂಸಗೊಳಿಸುವ ಕಾರ್ಯಾಚರಣೆ ನಡೆಸುತ್ತಿದ್ದ ನಗರ ಪಾಲಿಕೆಯ ಅಧಿಕಾರಿಗೆ ಓಡಿಸಿಕೊಂಡು ಬ್ಯಾಟ್‌ನಿಂದ ಹೊಡೆಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಾರ್ವಜನಿಕ ಸ್ಥಳದಲ್ಲಿ , ಪೊಲೀಸರು ಹಾಗೂ ಮಾಧ್ಯಮ ಸಿಬ್ಬಂದಿಗಳಿರುವಾಗಲೇ ಆಕಾಶ್ ಕಾನೂನನ್ನು ಕೈಗೆತ್ತಿಕೊಂಡಿದ್ದ.

ಆಕಾಶ್ ವಿರುದ್ಧ ಹಲ್ಲೆ, ದಂಗೆ ಹಾಗೂ ಸರಕಾರದ ಕೆಲಸಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಾದ ಬೆನ್ನಿಗೇ ಬಂಧಿಸಲಾಗಿತ್ತು. ಧೀರೇಂದ್ರ ವ್ಯಾಸ್ ಹಾಗೂ ಅಸಿತ್ ಖಾರೆ ಅವರನ್ನೊಳಗೊಂಡ ಮಹಾನಗರ ಪಾಲಿಕೆಯ ತಂಡ ಇಂದೋರ್‌ನ ಗಾಂಜಿ ಕಾಂಪೌಂಡ್ ಪ್ರದೇಶದಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ಅಭಿಯಾನ ಆರಂಭಿಸಿತು.

ಆಗ ಅವರ ಬಳಿ ಬಂದ ಆಕಾಶ್ ಹಾಗೂ ಅವರ ಬೆಂಬಲಿಗರ ಪಡೆ, "ನೀವು ಐದೇ ನಿಮಿಷದಲ್ಲಿ ಜಾಗ ಖಾಲಿ ಮಾಡಬೇಕು. ಇಲ್ಲದೇ ಇದ್ದರೆ, ಆ ಬಳಿಕ ಏನಾದರೂ ನಡೆದರೆ ಅದಕ್ಕೆ ನಾನು ಜವಾಬ್ದಾರಿಯಲ್ಲ'' ಎಂದು ಆಕಾಶ್, ಅಧಿಕಾರಿಗೆ ಎಚ್ಚರಿಕೆ ನೀಡಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News