ಜಯಂತಿಗಳು ಸಮುದಾಯಕ್ಕೆ ಸೀಮಿತವಾಗದಿರಲಿ: ಸಚಿವ ಖಾದರ್

Update: 2019-06-27 11:59 GMT

ಮಂಗಳೂರು,ಜೂ.27: ಜಯಂತಿಗಳ ಆಚರಣೆ ಬರೀ ಒಂದು ಸಮುದಾಯ, ಧರ್ಮ, ಜಾತಿಗೆ ಮೀಸಲು ಮಾಡುವುದು ಸರಿಯಲ್ಲ. ಸಮಾಜದಲ್ಲಿರುವ ಇತರ ಧರ್ಮದವರನ್ನು ಒಗ್ಗೂಡಿಸುವ ಮೂಲಕ ಅವರನ್ನು ಅರ್ಥೈಸಿಕೊಂಡು ಪರಸ್ಪರ ಬೆರೆತು ಏಕತೆ, ವಿಶ್ವಾಸವನ್ನು ಕಟ್ಟುವ ಸಮಾಜದ ನಿರ್ಮಾಣಕ್ಕೆ ಇಂತಹ ಜಯಂತಿಗಳು ಪೂರಕವಾಗುವಂತೆ ಜಿಲ್ಲಾಡಳಿತ ಶ್ರಮಪಡಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸೂಚಿಸಿದ್ದಾರೆ.

 ದ.ಕ. ಜಿಲ್ಲಾಡಳಿತ, ದ.ಕ. ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಸಹಕಾರದೊಂದಿಗೆ ಗುರುವಾರ ನಗರದ ಮಂಗಳೂರು ವಿವಿ ಕಾಲೇಜಿನ ರವೀಂದ್ರ ಸಭಾಭವನದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

 ರಾಜ್ಯ ಸರಕಾರ ಜಯಂತಿಗಳನ್ನು ಎಲ್ಲೆಡೆ ಆಚರಿಸುವ ಮೂಲಕ ಇತಿಹಾಸ ನಿರ್ಮಾಣ ಮಾಡಿದವರನ್ನು ನೆನಪಿಸುವ ಕೆಲಸ ಮಾಡುತ್ತಿದೆ. ಅಲ್ಲದೆ ಇತಿಹಾಸ ತಿಳಿದವರಿಂದ ಮಾತ್ರ ಇತಿಹಾಸ ನಿರ್ಮಾಣ ಮಾಡಲು ಸಾಧ್ಯ ಎಂದ ಸಚಿವ ಖಾದರ್, ರಾಜ್ಯ ಸರಕಾರ ಪ್ರಮುಖರ ಜಯಂತಿಗಳನ್ನು ಆಚರಿಸುವ ಮೂಲಕ ವಿದ್ಯಾರ್ಥಿಗಳಿಗೆ ಸಾಧಕರ ಪರಿಚಯದೊಂದಿಗೆ ತಮ್ಮ ಬದುಕಿನಲ್ಲಿ ಪ್ರೇರಣೆ ಮತ್ತು ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳು ಯಾವುದೇ ಸ್ಥಾನಕ್ಕೆ ಹೋದರೂ ಕೂಡ ಅವರು ಹಿಂದಿನ ಇತಿಹಾಸವನ್ನು ಅರಿಯುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ದ.ಕ. ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಮುಹಮ್ಮದ್ ಕರಂಬಾರು, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಡಾ.ದಾಮೋದರ ನಾರಾಲು, ಡಿಸಿಪಿ ಲಕ್ಷ್ಮಿ ಗಣೇಶ್, ಮಂಗಳೂರು ಸಹಾಯಕ ಆಯುಕ್ತ ರವಿಚಂದ್ರ ನಾಯಕ್, ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎ. ಉದಯ ಕುಮಾರ್ ಉಪಸ್ಥಿತರಿದ್ದರು. ಚಿಂತಕ, ಲೇಖಕ ಅರವಿಂದ ಚೊಕ್ಕಾಡಿ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


*ಮಾದರಿ ಜಯಂತಿ ಆಚರಣೆಗೆ ಒತ್ತು:

ಜಯಂತಿಗಳು ಸಮುದಾಯಕ್ಕೆ ಸೀಮಿತವಾಗದಂತೆ ನೋಡಿಕೊಳ್ಳುವ ವಿಚಾರದಲ್ಲಿ ಶೀಘ್ರದಲ್ಲಿ ಜಿಲ್ಲಾ ಕಚೇರಿಯಲ್ಲಿ ಅಧಿಕಾರಿಗಳ ಸಭೆಯನ್ನು ಕರೆಯಲಾಗುವುದು. ಅದರಲ್ಲಿ ಜಯಂತಿಗಳನ್ನು ಆಚರಣೆ ಮಾಡುವ ಕುರಿತು ರೂಪುರೇಷೆಯೊಂದನ್ನು ಸಿದ್ಧಪಡಿಸಿಕೊಂಡು ಎಲ್ಲ ಸಮುದಾಯ, ಜಾತಿ, ಧರ್ಮದವರನ್ನು ಒಟ್ಟು ಸೇರಿಸಿ ಆಚರಣೆ ಮಾಡುವಂತೆ ಜನಜಾಗೃತಿ ಮಾಡಲಾಗುವುದು. ರಾಜ್ಯದಲ್ಲಿಯೇ ಇಂತಹ ಮಾದರಿ ಜಯಂತಿ ಆಚರಣೆಗೆ ಮಂಗಳೂರು ಪ್ರೇರಣೆಯಾಗಬೇಕು ಎಂದು ಖಾದರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News