2ನೇ ಅಂತಸ್ತಿನಿಂದ ಬಿದ್ದ 2 ವರ್ಷದ ಮಗುವನ್ನು ಹಿಡಿದು ರಕ್ಷಿಸಿದ ಯುವಕ: ವಿಡಿಯೋ ವೈರಲ್

Update: 2019-06-27 12:43 GMT

ಇಸ್ತಾಂಬುಲ್, ಜೂ.27: ಎರಡನೆ ಅಂತಸ್ತಿನಿಂದ ಬಿದ್ದ ಮಗುವೊಂದನ್ನು ಯುವಕನೊಬ್ಬ ಹಿಡಿದು ರಕ್ಷಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಟರ್ಕಿಯ ರಾಜಧಾನಿ  ಇಸ್ತಾಂಬುಲ್ ನ ಫತೀಹ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಎರಡು ವರ್ಷದ ಹೆಣ್ಣು ಮಗು ಅಪಾರ್ಟ್‍ಮೆಂಟ್ ಕಟ್ಟಡದ ಎರಡನೇ ಅಂತಸ್ತಿನಿಂದ ಕೆಳಕ್ಕೆ ಬೀಳುತ್ತಿರುವಂತೆಯೇ ಕೆಳಗೆ ನಿಂತಿದ್ದ ಹದಿಹರೆಯದ ಯುವಕನೊಬ್ಬ ಆ ಮಗು ನೆಲಕ್ಕೆ ಬೀಳುವುದಕ್ಕಿಂತ ಮುಂಚೆಯೇ ಆಕೆಯನ್ನು ಭದ್ರವಾಗಿ ಹಿಡಿದುಕೊಳ್ಳುತ್ತಾನೆ.

ಈ ಯುವಕನ ಹೆಸರು ಫ್ಯೂಝಿ ಝಬಾತ್. ಝಬಾತ್ ಮಗುವನ್ನು ಹಿಡಿಯದೇ ಇರುತ್ತಿದ್ದರೆ ಆಕೆ ರಸ್ತೆಗಪ್ಪಳಿಸಿ ಪ್ರಾಣವನ್ನೇ ಕಳೆದುಕೊಳ್ಳುವ ಸಾಧ್ಯತೆಯಿತ್ತು.  ಆದರೆ ಯುವಕನ ಸಮಯಪ್ರಜ್ಞೆ ಮಗುವಿನ ಜೀವ ಉಳಿಸಿದೆಯಲ್ಲದೆ ಆಕೆಗೆ ಯಾವುದೇ ಗಾಯಗಳೂ ಉಂಟಾಗಿಲ್ಲ. ಮಗುವನ್ನು ರಕ್ಷಿಸಿದ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದಂದಿನಿಂದ  ಝಬಾತ್ ಹೀರೋ ಆಗಿ ಬಿಟ್ಟಿದ್ದಾನೆ.

ಅಲ್ಜೀರಿಯಾದ ವಲಸಿಗನಾಗಿರುವ ಝಬಾತ್  ಅದೇ ರಸ್ತೆಯಲ್ಲಿರುವ ವರ್ಕ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದು, ಮಗುವನ್ನು ರಕ್ಷಿಸಲು ತನ್ನಿಂದಾದ ಸಹಾಯ ಮಾಡಿದ್ದಾಗಿ ಹೇಳುತ್ತಾನೆ.

ಎರಡನೇ ಅಂತಸ್ತಿನ ಮನೆಯಲ್ಲಿ ತಾಯಿ ಅಡುಗೆ ಮಾಡುವುದರಲ್ಲಿ ನಿರತಳಾಗಿದ್ದಾಗ ಮಗು ಕಿಟಕಿ ಪಕ್ಕ ಬಂದು ಕೆಳಕ್ಕೆ ಬಿದ್ದಿತ್ತು. ಮಗುನ್ನು ರಕ್ಷಿಸಿದ ಝಬಾತ್ ಗೆ ಆಕೆಯ ಕುಟುಂಬ 200 ಟರ್ಕಿಶ್ ಲಿರಾ ನೀಡಿ ತನ್ನ ಧನ್ಯವಾದ ತಿಳಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News