×
Ad

ಉಡುಪಿ: 522.12 ಕೋಟಿ ರೂ. ಕ್ರಿಯಾಯೋಜನೆಗೆ ಜಿಪಂ ಅಸ್ತು

Update: 2019-06-27 20:02 IST

ಉಡುಪಿ, ಜೂ.27: ರಾಜ್ಯ ಸರಕಾರದಿಂದ 2019-20ನೇ ಸಾಲಿನ ಆಯ್ಯವ್ಯಯದಡಿ ಉಡುಪಿ ಜಿಪಂಗೆ ನಿಗದಿಯಾದ 522.12 ಕೋಟಿ ರೂ.ಗಳ ಕ್ರಿಯಾಯೋಜನೆಗೆ ದಿನಕರ ಬಾಬು ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಈ ಮೊತ್ತದಲ್ಲಿ ಉಡುಪಿ ಜಿಪಂ ಕಾರ್ಯಕ್ರಮಗಳಿಗೆ ಒಟ್ಟು 187.30 ಕೋಟಿ ಹಂಚಿಕೆಯಾಗಿದ್ದು, ತಾಪಂ ಕಾರ್ಯಕ್ರಮಗಳಿಗೆ 333.88 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಜಿಪಂಗೆ ಹಂಚಿಕೆಯಾದ ಮೊತ್ತದಲ್ಲಿ ವೇತನಗಳಿಗೆ 61.31 ಕೋಟಿ ರೂ.ಗಳನ್ನು, ವೇತನೇತರ ಕಾರ್ಯಕ್ರಮಗಳಿಗೆ 125.99ಕೋಟಿ ರೂ.ಗಳನ್ನು ನೀಡಲಾಗಿದೆ.

ಜಿಪಂ ಕಾರ್ಯಕ್ರಮಗಳಿಗೆ ಹಂಚಿಕೆಯಾದ ಮೊತ್ತಕ್ಕೆ ಕ್ರಿಯಾಯೋಜನೆ ತಯಾರಿಸಿ, ಜಿಪಂನ ಸ್ಥಾಯಿ ಸಮಿತಿ ಸಭೆಗಳಲ್ಲಿ ಮಂಡಿಸಿ ಚರ್ಚಿಸಲಾಗಿದೆ. ಬಳಿಕ ಇದನ್ನು ಮಂಗಳವಾರ ನಡೆದ ಜಿಪಂ ಸಾಮಾನ್ಯ ಸಭೆಯ ಅನುಮೋದನೆಗಾಗಿ ಮಂಡಿಸಲಾಯಿತು.

ಶಿಕ್ಷಣ ಇಲಾಖೆಗೆ ಒಟ್ಟು 69.35 ಕೋಟಿ ರೂ.ಅನುದಾನ ಹಂಚಿಕೆಯಾಗಿದೆ. ಇದರಲ್ಲಿ 26.48 ಕೋಟಿ ರೂ.ಅಕ್ಷರ ದಾಸೋಹ ಕಾರ್ಯಕ್ರಮದಡಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಕ್ಕೆ ಮೀಸಲಿರಿಸಲಾಗಿದೆ. ಶಾಲಾ ಕಟ್ಟಡಗಳ ನಿರ್ವಹಣೆಗೆ 90 ಲಕ್ಷ ರೂ. ಹಾಗೂ ಶಾಲಾ ಪೀಠೋಪಕರಣಗಳ ಖರೀದಿಗಾಗಿ 32 ಲಕ್ಷ ರೂ.ಗಳನ್ನು ನಿಗದಿ ಪಡಿಸಲಾಗಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಕ್ರೀಡಾಕೂಟಗಳ ಸಂಘಟನೆಗಾಗಿ 20 ಲಕ್ಷ ರೂ., ಕ್ರೀಡಾಂಗಣಗಳ ನಿರ್ವಹಣೆಗೆ 78 ಲಕ್ಷ ರೂ., ಜಿಲ್ಲೆಯ ಕ್ರೀಡಾಶಾಲೆಗಳ ನಿರ್ವಹಣೆಗೆ 20 ಲಕ್ಷ ಹಂಚಿಕೆ ಮಾಡಲಾಗಿದೆ. ಸರಕಾರಿ ಶಾಲೆಗಳಿಗೆ ತಲಾ 20,000ರೂ. ಮೌಲ್ಯದ ಕ್ರೀಡೋಪಕರಣಗಳನ್ನು ಸರಬರಾಜು ಮಾಡಲು 9ಲಕ್ಷ ರೂ.ತೆಗೆದಿರಿಸಲಾಗಿದೆ. ಅದೇ ರೀತಿ ಅಜ್ಜರಕಾಡಿನಲ್ಲಿರುವ ಒಳಾಂಗಣ ಕ್ರೀಡಾಂಗಣಕ್ಕೆ ಐದು ಲಕ್ಷ ರೂ.ನೀಡಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ನಿರ್ವಹಣೆಗಾಗಿ 1.84 ಕೋಟಿ ರೂ.,ಪ.ಜಾತಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ 1.79 ಕೋಟಿ ರೂ., ಕಾಲೇಜು ವಿದ್ಯಾರ್ಥಿಗಳ ಪುರಸ್ಕಾರಕ್ಕಾಗಿ 1.30 ಕೋಟಿ ರೂ., ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿ ವೇತನಕ್ಕೆ 80.30ಲಕ್ಷ ರೂ., ಸನಿವಾಸಿ ಶಾಲೆಗಳ ನಿರ್ವಹಣೆಗೆ 1.32 ಕೋಟಿ ರೂ., ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳ ಧನಸಹಾಯ ಮತ್ತು ನಿರ್ವಹಣೆಗೆ 3.31ಕೋಟಿ ರೂ., ಮಹಿಳಾ ಕಲ್ಯಾಣ ಕೇಂದ್ರದ ನಿರ್ವಹಣೆಗೆ 10 ಲಕ್ಷ ರೂ.ಗಳನ್ನು ಒದಗಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 1.03 ಕೋಟಿ ರೂ. ಹಂಚಿಕೆಯಾಗಿದೆ. ಔದ್ಯಮಿಕ ತರಬೇತಿ ಸಂಸ್ಥೆಗೆ 55 ಲಕ್ಷ ರೂ. ನೀಡಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆಯುವ ವಿದ್ಯಾರ್ಥಿ ನಿಲಯಗಳ ನಿರ್ವಹಣೆಗೆ12.15 ಕೋಟಿ ರೂ., ವಿದ್ಯಾರ್ಥಿಗಳಿಗೆ ಇತರ ರಿಯಾಯಿತಿಗಳಿಗಾಗಿ 9.39 ಕೋಟಿ ರೂ. ನೀಡಿದರೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿಲಯಗಳ ನಿರ್ವಹಣೆ ಮತ್ತು ವಿದ್ಯಾರ್ಥಿ ವೇತನಕ್ಕೆ ಒಟ್ಟು 76.21 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ.

ಜಿಲ್ಲೆಯ ಕೃಷಿ ಇಲಾಖೆಯ ಕಾರ್ಯಕ್ರಮಗಳಿಗೆ 96.89 ಲಕ್ಷ ರೂ.ಹಂಚಿಕೆ ಯಾಗಿದ್ದು, ಇದರಲ್ಲಿ ಕೃಷಿ ಯಂತ್ರೋಕರಣಗಳ ವಿತರಣೆಗೆ 25 ಲಕ್ಷ ರೂ. ನಿಗದಿಯಾಗಿದೆ. ತೋಟಗಾರಿಕಾ ಇಲಾಖೆ ವಲಯದಡಿ 2.24 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. ಇದರಲ್ಲಿ ತಾಳೆ ಬೆಳೆ ಅಭಿವೃದ್ಧಿ ಯೋಜನೆಗೆ 3.60 ಲಕ್ಷ ರೂ.ಗಳನ್ನು ನೀಡಲಾಗಿದೆ.

ಪಶುಸಂಗೋಪನಾ ಇಲಾಖಾ ಕಾರ್ಯಕ್ರಮಗಳಿಗೆ 2.72 ಕೋಟಿ ರೂ. ನಿಗದಿಯಾದರೆ, ಮೀನುಗಾರಿಕಾ ಇಲಾಖೆಗೆ 1.29 ಕೋಟಿ ರೂ. ಹಂಚಿಕೆ ಯಾಗಿದ್ದು ಇದರಲ್ಲಿ 10.50 ಲಕ್ಷ ರೂ. ಮೀನು ಮಾರುಕಟ್ಟೆ ನಿರ್ಮಾಣಕ್ಕೆಂದು ಹಂಚಿಕೆಯಾಗಿದೆ. ಗ್ರಾಮಾಂತರ ಕೈಗಾರಿಕಾ ಕಾರ್ಯಕ್ರಮಗಳಿಗೆ 82.12 ಲಕ್ಷ ರೂ., ರೇಷ್ಮೆ ಇಲಾಖೆ ಕಾರ್ಯಕ್ರಮಗಳಿಗೆ 39.84 ಲಕ್ಷ ಹಾಗೂ ಕೈಮಗ್ಗ ಮತ್ತು ಜವುಳಿ ಇಲಾಖೆಗೆ 22 ಲಕ್ಷ ರೂ.ಗಳನ್ನು ಹಂಚಲಾಗಿದೆ.

ಸಾಮಾಜಿಕ ಅರಣ್ಯ ವಲಯದಡಿ ಒಟ್ಟು 2.07 ಕೋಟಿ ರೂ.ಹಂಚಿಕೆ ಮಾಡಲಾಗಿದ್ದು, ಜಿಲ್ಲೆಯ 194.50 ಹೆಕ್ಟೇರ್ ಪ್ರದೇಶದಲ್ಲಿ ಸಾಮಾಜಿಕ ಅರಣ್ಯೀಕರಣಕ್ಕಾಗಿ ಒಂದು ಕೋಟಿ ರೂ.ವನ್ನು ಈ ವರ್ಷದ ಕ್ರಿಯಾ ಯೋಜನೆಯಲ್ಲಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News