ಸತೀಶ್ ಯು. ಪೈಗೆ ಪತ್ರಿಕಾ ದಿನದ ಗೌರವ
Update: 2019-06-27 20:03 IST
ಉಡುಪಿ, ಜೂ.27: ಬೆಂಗಳೂರಿನ ಪತ್ರಕರ್ತರ ವೇದಿಕೆ ಪತ್ರಿಕಾ ದಿನಾಚರಣೆಯ ಅಂಗವಾಗಿ ‘ಹಿರಿಯರೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮದಡಿ ಹಿರಿಯ ಪತ್ರಿಕೋದ್ಯಮಿ, ಮಣಿಪಾಲದ ಸತೀಶ.ಯು.ಪೈ ಅವರನ್ನು ಪತ್ರಿಕಾ ದಿನದ ಗೌರವಕ್ಕೆ ಆಯ್ಕೆ ಮಾಡಿದೆ.
ಈ ಗೌರವಕ್ಕೆ ಪಾತ್ರವಾಗುತ್ತಿರುವ 12ನೇ ಹಿರಿಯರು ಇವರಾಗಿದ್ದಾರೆ ಎಂದು ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ. ಮಣಿಪಾಲದ ಅನಂತನಗರದಲ್ಲಿರುವ ಸತೀಶ್ ಪೈ ಅವರ ನಿವಾಸದಲ್ಲಿ ಜೂ.30ರಂದು ಅಪರಾಹ್ನ 2:30ಕ್ಕೆ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಸತೀಶ್ ಪೈ ಅವರಿಗೆ ಗೌರವ ಪ್ರದಾನ ಮಾಡಲಿದ್ದಾರೆ.
ಹಿರಿಯ ಸಂಗೀತಜ್ಞ ಉಡುಪಿ ನಾದವೈಭವಂ ವಾಸುದೇವ ಭಟ್, ಹಿರಿಯ ಉದ್ಯಮಿ ವಿಶ್ವನಾಥ ಶೆಣೈ, ಸಾಹಿತಿ ಕು.ಗೋ, ಶಿಕ್ಷಣತಜ್ಞ ಎ. ನರಸಿಂಹ, ಸಂಘಟಕ ಭುವನಪ್ರಸಾದ್ ಹೆಗ್ಡೆ ಇವರು ಉಪಸ್ಥಿತರಿರುವರು ಎಂದು ಶೇಖರ ಅಜೆಕಾರು ತಿಳಿಸಿದ್ದಾರೆ.