ಇವಿಎಂ ವಿರೋಧಿಸಿ ಮಹಿಳಾ ಕಾಂಗ್ರೆಸ್‌ನಿಂದ ಅಂಚೆ ಚಳವಳಿ
ಉಡುಪಿ, ಜೂ.27: ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯು ರಾಜ್ಯದಾದ್ಯಂತ ಹಮ್ಮಿಕೊಂಡಿರುವ ‘ಇವಿಎಮ್ ತೊಲಗಿಸಿ, ಮತಪತ್ರ ಬಳಸಿ, ಪ್ರಜಾಪ್ರಭುತ್ವ ಉಳಿಸಿ’ ಚಳವಳಿಯನ್ನು ಇಂದು ಉಡುಪಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಉಡುಪಿಯ ಪ್ರಧಾನ ಅಂಚೆ ಕಚೇರಿಯ ಆವರಣದಲ್ಲಿ ಅಂಚೆ ಕಾರ್ಡ್‌ನಲ್ಲಿ ಚಳುವಳಿಯ ಧ್ಯೇಯವಾಕ್ಯಗಳನ್ನು ಬರೆದು ಅಂಚೆಪೆಟ್ಟಿಗೆಗೆ ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಿದ್ದರೆ ಇವಿಎಂ ತೊಲಗಬೇಕು ಹಾಗೂ ಮತಪತ್ರ ಬಳಸುವ ಚುನಾವಣೆ ಮತ್ತೆ ಜಾರಿಗೆ ಬರಬೇಕು. ಇವಿಎಂ ಅವ್ಯವಸ್ಥೆಯ ಆಗರವಾಗಿದ್ದು, ಅದನ್ನು ಹ್ಯಾಕ್ ಮಾಡಿ ಬೇಕಾದ ಅಭ್ಯರ್ಥಿ ಯನ್ನು ಗೆಲ್ಲಿಸಲು ಸಾಧ್ಯವಿದೆ. ಇದಕ್ಕೆ ನಮ್ಮ ವಿರೋಧವಿದೆ ಎಂದವರು ಹೇಳಿದರು.
ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್,ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ, ಕಾಪು ಬ್ಲಾಕ್ ಅಧ್ಯಕ್ಷೆ ಪ್ರಭಾ ಶೆಟ್ಟಿ, ಜಯಶ್ರೀ ಶೇಟ್ ಹಾಗೂ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.