ದಯಾನತ್ ಖಾನ್ ಹತ್ಯೆ ಪ್ರಕರಣ: ನ್ಯಾಯಾಂಗ ತನಿಖೆಗೆ ಪಾಪ್ಯುಲರ್ ಫ್ರಂಟ್ ಆಗ್ರಹ
ಬೆಂಗಳೂರು: ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ದಯಾನತ್ ಖಾನ್ ಎಂಬ ಮುಸ್ಲಿಮ್ ಯುವಕನ ಬರ್ಬರ ಹತ್ಯೆ ಪ್ರಕರಣವನ್ನು ರಾಜ್ಯ ಸರಕಾರವು ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ತನಿಖೆಗೊಳಪಡಿಸಬೇಕು ಮತ್ತು ಸಂತ್ರಸ್ತ ಕುಟುಂಬಕ್ಕೆ ಕೂಡಲೇ ಪರಿಹಾರ ಮೊತ್ತವನ್ನು ಘೋಷಿಸಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ಆಗ್ರಹಿಸಿದ್ದಾರೆ.
ಈ ಹತ್ಯೆ ಪ್ರಕರಣವನ್ನು ಸ್ಥಳೀಯ ಘಟನೆ ಎಂಬಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದ ಕೊಲೆ ಎಂಬ ಪ್ರಚಾರ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಮೃತ ದಯಾನತ್ ಖಾನ್ ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಹಾಕಿದ್ದ ಮಿಲಾದ್ ಹಸಿರು ಧ್ವಜವನ್ನು ಆಕ್ಷೇಪಿಸಿ ನಡೆದ ಹತ್ಯೆ ಕೃತ್ಯ ಇದಾಗಿದ್ದು, ಅಕ್ರಮಕೂಟವು ಸಂಚು ಹೂಡಿ ನಡೆಸಿದ ಪೂರ್ವಯೋಜಿತ ಕೃತ್ಯವಾಗಿದೆ. ಈಗಾಗಲೇ ದಯಾನತ್ ಖಾನ್ ತಾಯಿ ಹೆಸರಿಸಿರುವ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಿ ಈ ಕೃತ್ಯದ ಹಿಂದಿರುವ ಸಂಚನ್ನು ಬಯಲಿಗೆಳೆಯಬೇಕು ಎಂದು ಪಾಪ್ಯುಲರ್ ಫ್ರಂಟ್ ಒತ್ತಾಯಿಸುತ್ತದೆ.
ದಯಾನತ್ ಖಾನ್ ಹತ್ಯೆ ಪ್ರಕರಣವನ್ನು ಸರಕಾರವು ಗಂಭೀರವಾಗಿ ಪರಿಗಣಿಸಿ ಅದರ ಹಿಂದಿರುವ ಎಲ್ಲ ಆರೋಪಿಗಳನ್ನು ಮತ್ತು ಷಡ್ಯಂತ್ರ ಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಪಾಪ್ಯುಲರ್ ಫ್ರಂಟ್ ಆಗ್ರಹಿಸುತ್ತದೆ.