ಭಾರತದ ‘ಪ್ರತೀಕಾರದ ತೆರಿಗೆ ’ ಅಸ್ವೀಕಾರಾರ್ಹ: ಟ್ರಂಪ್

Update: 2019-06-27 15:47 GMT

ಜಿ20 ಶೃಂಗಸಭೆಯಲ್ಲಿ ಮೋದಿ ಜೊತೆ ಮಾತುಕತೆಗೆ ಇಂಗಿತ

   ಹೊಸದಿಲ್ಲಿ,ಒಸಾಕಾ,ಜೂ.27: ಭಾರತವು ತನ್ನ ದೇಶದ ವಿರುದ್ಧ ‘ಪ್ರತೀಕಾರಾತ್ಮಕ ತೆರಿಗೆ’ಗಳನ್ನು ಹೇರಿರುವುದು ಅಸ್ವೀಕಾರಾರ್ಹವೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ. ಈ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಮಾತುಕತೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.

ಈ ಕುರಿತು ಗುರುವಾರ ಬೆಳಗ್ಗೆ ಟ್ವೀಟ್ ಮಾಡಿರುವ ಟ್ರಂಪ್, ‘‘ಹಲವಾರು ವರ್ಷಗಳಿಂದ ಭಾರತವು ಅಮೆರಿಕದ ಉತ್ಪನ್ನಗಳ ಮೇಲೆ ಅತ್ಯಧಿಕ ತೆರಿಗೆಗಳನ್ನು ವಿಧಿಸುತ್ತಿರುವ ಹೊರತಾಗಿಯೂ, ಅದು ತೀರಾ ಇತ್ತೀಚೆಗೆ ಸುಂಕಗಳನ್ನು ಇನ್ನಷ್ಟು ಹೆಚ್ಚಿಸಿದೆ. ಇದು ಅಸ್ವೀಕಾರಾರ್ಹ ಹಾಗೂ ತೆರಿಗೆಗಳನ್ನು ಹಿಂತೆಗೆದುಕೊಳ್ಳಬೇಕು’’ ಎಂದು ಹೇಳಿದ್ದಾರೆ.

 ಜಪಾನ್‌ನ ಒಸಾಕಾದಲ್ಲಿ ಶುಕ್ರವಾರ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಟ್ರಂಪ್ ಹಾಗೂ ಮೋದಿ ಪಾಲ್ಗೊಳ್ಳಲಿದ್ದು, ಈ ಸಂದರ್ಭದಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆಂದು ಮೂಲಗಳು ತಿಳಿಸಿವೆ.

ಆದರೆ ಇತರ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅಮೆರಿಕದ ಉತ್ಪನ್ನಗಳಿಗೆ ವಿಧಿಸುತ್ತಿರುವ ತೆರಿಗೆ ಅಧಿಕವೇನಲ್ಲವೆಂದು ಭಾರತವು ಹೇಳಿರುವುದಾಗಿ ವಿವಿಧ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

    ಭಾರತದಿಂದ ಆಮದಾಗುವ ಹಲವಾರು ಉತ್ಪನ್ನಗಳಿಗೆ ಸುದೀರ್ಘ ಕಾಲದಿಂದ ತಾನು ನೀಡುತ್ತಿದ್ದ ತೆರಿಗೆ ರಿಯಾಯಿತಿಗಳನ್ನು ಅಮೆರಿಕವು ಜೂನ್ 1ರಂದು ಹಿಂತೆಗೆದುಕೊಂಡ ಬಳಿಕ ಭಾರತವು ಅಮೆರಿಕದ 28 ಉತ್ಪನ್ನಗಳ ಮೇಲೆ ಸುಂಕಗಳನ್ನು ವಿಧಿಸಿತ್ತು.

ಅಮೆರಿಕ ಹಾಗೂ ಇತರ ದೇಶಗಳ ನಡುವಣ ಅಮದು ಹಾಗೂ ರಫ್ತಿನಲ್ಲಿ ವಾಣಿಜ್ಯ ಕೊರತೆಯನ್ನು ಸರಿದೂಗಿಸುವ ಅಧ್ಯ ಕ್ಷ  ಟ್ರಂಪ್ ಅವರ ನಿಲುವಿಗೆ ಅನುಗುಣವಾಗಿ ಅಮೆರಿಕವು ಭಾರತದ ಉತ್ಪನ್ನಗಳ ವಿರುದ್ಧ ತೆರಿಗೆಗಳನ್ನು ವಿಧಿಸಿದೆ. ಅಮೆರಿಕವು ಇತರ ದೇಶಗಳಿಗೆ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕಿಂತ ಅಧಿಕವಾಗಿ ಅವುಗಳ ಉತ್ಪನ್ನಗಳನ್ನು ಖರೀದಿಸುತ್ತಿರುವುದರಿಂದ ದೇಶದ ಉತ್ಪಾದನಾ ರಂಗವು ಕುಂಠಿತಗೊಂಡಿದೆಯೆಂದು ಮೂಲಗಳು ತಿಳಿಸಿವೆ.

ಕಳೆದ ಕೆಲವು ತಿಂಗಳುಗಳಿಂದ ಅಮೆರಿಕವು ಚೀನಾ ಹಾಗೂ ಭಾರತ ಸೇರಿದಂತೆ ಜಗತ್ತಿನಾದ್ಯಂತದ ವಿವಿಧ ರಾಷ್ಟ್ರಗಳಿಂದ ತಾನು ಆಮದು ಮಾಡಿಕೊಳ್ಳುತ್ತಿರುವ ಕೋಟ್ಯಂತರ ಡಾಲರ್ ಮೌಲ್ಯದ ಉತ್ಪನ್ನಗಳಿಗೆ ನೀಡಿದ್ದ ರಿಯಾಯಿತಿಗಳನ್ನು ಹಿಂತೆಗೆದುಕೊಂಡು ಹೊಸದಾಗಿ ತೆರಿಗೆಗಳನ್ನು ವಿಧಿಸಿರುವುದು, ವಾಣಿಜ್ಯಸಮರಕ್ಕೆ ಎಡೆಮಾಡಿಕೊಟ್ಟಿದೆ. ಭಾರತದಂತೆ ವಿವಿಧ ರಾಷ್ಟ್ರಗಳು ಕೂಡಾ ಅಮೆರಿಕದ ಉತ್ಪನ್ನಗಳಿಗೆ ಪ್ರತೀಕಾರಾತ್ಮಕ ತೆರಿಗೆಗಳನ್ನು ಹೇರಿವೆ.

ಅಮೆರಿಕದ ವಿದೇಶಾಗ ಸಚಿವ ಮೈಕ್ ಪಾಂಪಿಯೊ ಅವರು ಬುಧವಾರ ಭಾರತದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಜೊತೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಭಾರತೀಯ ಉತ್ಪನ್ನಗಳಿಗೆ ಅಧಿಕ ತೆರಿಗೆಗಳನ್ನು ವಿದಿಸುವ ತನ್ನ ಆಡಳಿತದ ಕ್ರಮವನ್ನು ಸಮರ್ಥಿಸಿದ್ದರು. ಭಾರತೀಯ ಮಾರುಕಟ್ಟೆಯನ್ನು ದೊಡ್ಡ ಮಟ್ಟದಲ್ಲಿ ತಲುಪುವ ಅವಶ್ಯಕತೆ ಅಮೆರಿಕಕ್ಕೆ ಇರುವುದಾಗಿ ಅವರು ಪ್ರತಿಪಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News