×
Ad

ಕುವೈತ್ ಮೇಲೆ ರಾಜತಾಂತ್ರಿಕ ಒತ್ತಡ ಹೇರಲು ಆಗ್ರಹ: ವಿದೇಶಾಂಗ ಸಚಿವರಿಗೆ ಸಂಸದ ನಳಿನ್ ಪತ್ರ

Update: 2019-06-27 22:37 IST

ಮಂಗಳೂರು, ಜೂ.27: ಕುವೈತ್‌ನಲ್ಲಿ ಉದ್ಯೋಗ ವಂಚಿತರಾಗಿ ತಾಯ್ನೋಡಿಗೆ ಮರಳಲು ಕಾಯುತ್ತಿರುವ 73 ಮಂದಿ ಸಂತ್ರಸ್ತ ಭಾರತೀಯರ ಬಿಡುಗಡೆಗೆ ಕುವೈತ್ ಸರಕಾರದ ಮೇಲೆ ರಾಜತಾಂತ್ರಿಕ ಒತ್ತಡ ಹೇರುವಂತೆ ಆಗ್ರಹಿಸಿ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಗುರುವಾರ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್‌ಗೆ ಪತ್ರ ಬರೆದಿದ್ದಾರೆ.

ಕುವೈತ್‌ನ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ತೆರಳಿದ್ದ 73 ಮಂದಿ ಭಾರತೀಯರು ಬಳಿಕ ಕೆಲಸ ಸಿಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಅವರನ್ನು ಮರಳಿ ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ಎಲ್ಲ ರೀತಿಯ ನೆರವು ನೀಡುತ್ತಿದೆ. ಆದರೂ ಸಂತ್ರಸ್ತರನ್ನು ತಾಯ್ನಿಡಿಗೆ ಮರಳಿಸುವಲ್ಲಿ ಕುವೈತ್ ಕಾನೂನಿನಿಂದಾಗಿ ವಿಳಂಬವಾಗುತ್ತಿದೆ. ಅಲ್ಲದೆ, ಸಂತ್ರಸ್ತರಿಗೆ ಉದ್ಯೋಗ ನೀಡಿದ ಕಂಪೆನಿ ಬಾಕಿ ಮೊತ್ತ ಇರಿಸಿಕೊಂಡು ಅನ್ಯಾಯ ಎಸಗಿದೆ. ಸಂತ್ರಸ್ತರ ಬಾಕಿ ಮೊತ್ತವನ್ನು ಚುಕ್ತಾ ಮಾಡುವ ಜೊತೆಗೆ ಅವರಿಗೆ ತಾಯ್ನಾಡಿಗೆ ಮರಳಲು ವಿಮಾನದ ಟಿಕೆಟ್ ವ್ಯವಸ್ಥೆಯನ್ನು ಒದಗಿಸಬೇಕಾಗಿದೆ. ಪಾಸ್‌ಪೋರ್ಟ್‌ನ್ನು ಕೂಡ ವಾಪಸ್ ನೀಡಲು ಒತ್ತಡ ಹೇರುವಂತೆ ಕುವೈತ್‌ನ ಭಾರತೀಯ ರಾಯಭಾರಿ ಕಚೇರಿಗೆ ಸೂಚನೆ ನೀಡುವಂತೆ ನಳಿನ್ ಕುಮಾರ್ ಕಟೀಲ್ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಈಗಾಗಲೇ ಸಂತ್ರಸ್ತರ ಪೈಕಿ 35 ಮಂದಿ ಕರಾವಳಿಗರಿಗೆ ಮಂಗಳೂರಿನ ಟ್ರಾವಲರ್ ಏಜೆನ್ಸಿ ಟಿಕೆಟ್ ವ್ಯವಸ್ಥೆ ಮಾಡಿದ ಬಗ್ಗೆ ಭರವಸೆ ನೀಡಿರುವುದಾಗಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News